ಹಾಸನ: ಸುಖಾ ಸುಮ್ಮನೆ ನಮ್ಮೂರಿನ ಕಡೆ ಓಡಾಡುವುದು ಕಂಡು ಬಂದರೇ ಗ್ರಾಮದವರು ಕಲ್ಲುತೂರಾಟ ಮಾಡ್ತಾರೆ ಎಚ್ಚರಿಕೆ ಅಂತ ನಾಮಫಲಕವನ್ನ ಹಾಕಿ ರಸ್ತೆ ಬಂದ್ ಮಾಡಿರುವ ಘಟನೆ ಅರಕಲಗೂಡು ತಾಲೂಕಿನ ಭಂಗಿ ತಿಮ್ಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ, ಭಂಗಿ ತಿಮ್ಮನಕೊಪ್ಪಲು ಗ್ರಾಮದ ಮುಖಂಡರುಗಳು ಗ್ರಾಮದ ಪ್ರವೇಶದ ದ್ವಾರಕ್ಕೆ ಕಲ್ಲು ಮತ್ತು ಮರದ ದಿಮ್ಮಿಗಳನ್ನ ಹಾಕಿ ರಸ್ತೆ ಬಂದ್ ಮಾಡಿದ್ದು, ಹಲಗೆಯ ಮೇಲೆ ಗ್ರಾಮಕ್ಕೆ ಯಾವ ವಾಹನಗಳು ಬಾರದಂತೆ ನಿಷೇಧಾಜ್ಞೆ ಹೇರಿದ್ದಾರೆ. ಇನ್ನು ಇದನ್ನ ಮೀರಿ ಹೊರಗಿನಿಂದ ಬರುವಂತಹ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ. ಅಲ್ಲದೇ ಪೊಲೀಸರಿಗೆ, ಆರೋಗ್ಯ ಇಲಾಖೆಗೆ ಮಾಹಿತಿಯನ್ನ ನೀಡಿ ಅವರ ವಶಕ್ಕೆ ಒಪ್ಪಿಸಲಾಗುತ್ತದೆ. ಇದಕ್ಕೂ ಮೀರಿ ಆ ವ್ಯಕ್ತಿಗಳು ಗಲಾಟೆ ಮಾಡಿ ಗ್ರಾಮ ಪ್ರವೇಶ ಮಾಡಲು ಮುಂದಾದ್ರೆ, ಗ್ರಾಮಸ್ಥರು ಕಲ್ಲು ತೂರಾಟ ಮಾಡುತ್ತಾರೆ. ಇದ್ರಿಂದ ಯಾವುದೇ ಪ್ರಾಣಹಾನಿಯಾದ್ರೆ ಗ್ರಾಮಸ್ಥರುಗಳು ಹೊಣೆಗಾರರಲ್ಲ ಎಂಬ ಎಚ್ಚರಿಕೆಯನ್ನ ಕೂಡಾ ನೀಡಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಏ.14ರ ತನಕ ಗ್ರಾಮಕ್ಕೆ ಬೇಕಾದ ಅಗತ್ಯ ವಸ್ತುಗಳನ್ನ ಕೊಂಡುಕೊಳ್ಳಲು ಮತ್ತು ಗ್ರಾಮದಲ್ಲಿ ಮಾರಾಟ ಮಾಡಲು ಬರುವವರಿಗೆ ಸಮಯ ನಿಗದಿ ಮಾಡಿದ್ದು, ಗ್ರಾಮದ ಮುಖಂಡರುಗಳ ಅನುಮತಿಯ ಮೇರೆಗೆ ಅವಕಾಶ ನೀಡಲಾಗುತ್ತದೆ. ಹಾಗಾಗಿ ಗ್ರಾಮದೊಳಗೆ ಅತಿಕ್ರಮ ಪ್ರವೇಶ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ ಎಂದು ನಾಮಫಲಕದಲ್ಲಿ ಬರೆದು ಎಚ್ಚರಿಕೆ ನೀಡಿದ್ದಾರೆ.