ಚನ್ನರಾಯಪಟ್ಟಣ: ಯಾರೀ ಚಾಣಕ್ಯ? ಅವನೇನು ದೇವಲೋಕದಿಂದ ಇಳಿದು ಬಂದಿದ್ದಾನಾ. 8 ಬಾರಿ ಗೆದ್ದಿದ್ದೇವೆ ಹಾಗಿದ್ರೆ ನಾವ್ಯಾರು? ಒಂದೇ ಒಂದು ಚುನಾವಣೆಯಲ್ಲಿ ಗೆದ್ದಿದ್ದಾನಾ ಅವನು? ದುಡ್ಡು ಹಂಚುವುದರಲ್ಲಿ ಆತ ಚಾಣಕ್ಯನೇ ಹೊರತು, ಬೇರೆ ಯಾವುದರಲ್ಲೂ ಅಲ್ಲ ಎಂದು ಉಪಚುನಾವಣೆಯ ಉಸ್ತುವಾರಿ ವಹಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಖತ್ ಟಾಂಗ್ ನೀಡಿದರು.
ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಬಂದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ದುಡ್ಡು ಹಂಚುವುದರಲ್ಲಿ ಚಾಣಕ್ಯನೇ ಹೊರತು ಬೇರೆ ಯಾವುದರಲ್ಲೂ ಅಲ್ಲ. ಅವರ ಅಪ್ಪ ಯಡಿಯೂರಪ್ಪ ಕೆಜೆಪಿ ಪಕ್ಷ ಮಾಡಿದಾಗ ವಿಜಯೇಂದ್ರ ಎಲ್ಲಿಗೆ ಹೋಗಿದ್ದ? ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂದರೆ ಅದರಲ್ಲಿ ಗೊತ್ತಾಗುತ್ತೆ ಇಲ್ಲಿರೋದು ಯಡಿಯೂರಪ್ಪ ಮತ್ತು ಅವರ ಮಗನ ಸರ್ಕಾರ ಅಂತ. ಒಂದೊಂದು ವೋಟಿಗೆ 5ರಿಂದ 6 ಸಾವಿರ ರೂ. ಕೊಟ್ಟು ಚುನಾವಣೆ ಗೆಲ್ಲಲು ಹೊರಟಿದ್ದಾರೆ. ದುಡ್ಡು ಹಂಚುವುದರಲ್ಲಿ ಮಾತ್ರ ವಿಜಯೇಂದ್ರ ಚಾಣಕ್ಯ ಎಂದು ವ್ಯಂಗ್ಯವಾಡಿದರು.
ಸಿಡಿ ಪ್ರಕರಣಕ್ಕೆ ಎಸ್ಐಟಿ ನೇಮಿಸಿರುವುದು ರಮೇಶ್ ಜಾರಕಿಹೊಳಿ ರಕ್ಷಣೆ ಮಾಡುವುದಕ್ಕಾಗಿದೆ. ಎಸ್ಐಟಿ ರಚನೆ ಮಾಡಿರೋದು ಕೂಡ ಬಿಜೆಪಿ ಸರ್ಕಾರವಾಗಿದೆ. ಸರ್ಕಾರ ಹೇಳಿದ ಹಾಗೆ ಪೊಲೀಸರು ಕೇಳುತ್ತಾರೆ. ಬೇರೆಯವರು ಆಗಿದ್ದರೆ ಇಷ್ಟೊತ್ತಿಗೆ ಬಂಧಿಸಿರುತ್ತಿದ್ದರು ಎಂದ ಸಿದ್ದರಾಮಯ್ಯ, ಲಖನ್ ಜಾರಕಿಹೊಳಿ ಹೇಳಿಕೆಗೆ ಕೆಂಡಾಮಂಡಲವಾಗಿ, ಮೊದಲು ದಾಖಲೆ ಇದ್ದರೆ ನೀಡಲಿ. ಕೇವಲ ಬಾಯಿಮಾತಿನಲ್ಲಿ ಹೇಳಿದರೆ ರಾಜೀನಾಮೆ ಕೊಡಲು ಸಾಧ್ಯವಿಲ್ಲ ಎಂದು ಡಿಕೆಶಿ ಪರ ಬ್ಯಾಟಿಂಗ್ ಮಾಡಿದರು.
ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಕಳೆದ ಸಾರಿ ಎರಡು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೆವು. ಈಗ ಮೂರು ಕಡೆ ಸ್ಪರ್ಧೆ ಮಾಡಿದ್ದು, ಮೂರರಲ್ಲೂ ನಾವು ಗೆಲ್ಲುವ ಅವಕಾಶ ಹೆಚ್ಚಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಬಿಜೆಪಿಯವರು ದಿವಾಳಿ ಮಾಡಿದ್ದಾರೆ. ಈ ಸರ್ಕಾರ 20 ಸಾವಿರ ಕೋಟಿ ಸಾಲ ತರುವ ಮೂಲಕ ರಾಜ್ಯವನ್ನು ದಿವಾಳಿ ಮಾಡುತ್ತಿದೆ. ನನ್ನ ಸರ್ಕಾರದಲ್ಲಿ ಮಾಡಿದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ, ಕ್ಷೀರ ಕ್ರಾಂತಿ, ಯೋಜನೆಯನ್ನು ಹಂತಹಂತವಾಗಿ ನಿಲ್ಲಿಸಲು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.