ಶ್ರವಣಬೆಳಗೊಳ: ಕೋವಿಡ್-19 ಹಿನ್ನೆಲೆ ಈ ವರ್ಷದ ಮಹಾವೀರ ಜಯಂತಿ ಹಾಗೂ ವಾರ್ಷಿಕ ರಥೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಿಳಿಸಿದ್ದಾರೆ.
ಕೊರೊನಾ ವೈರಸ್ ಹರಡುವಿಕೆ ತಡೆಯಲು ಕೇಂದ್ರ ಸರ್ಕಾರ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‌ಡೌನ್ ವಿಧಿಸಿದೆ. ಇದು ವೈರಸ್ ನಿಯಂತ್ರಣ ದೃಷ್ಟಿಯಿಂದ ಬಹಳ ಸೂಕ್ತ ಕ್ರಮವಾಗಿದೆ. ಇದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಏ.6ರಂದು ನಡೆಸಲು ಉದ್ದೇಶಿಸಿದ್ದ ಮಹಾವೀರ ಜಯಂತಿ ಹಾಗೂ ಏ. 8ರಂದು ನಡೆಯಬೇಕಾಗಿದ್ದ ವಾರ್ಷಿಕ ಪಂಚಕಲ್ಯಾಣ ರಥೋತ್ಸವವನ್ನು ರದ್ದುಗೊಳಿಸಲಾಗಿದೆ. ಕೊರೊನಾ ಮುಗಿಯುವ ತನಕ ಶ್ರೀಕ್ಷೇತ್ರದಲ್ಲಿ ಯಾವುದೇ ಪೂಜೆ - ಆರಾಧನೆಗಳು, ಉತ್ಸವ - ಮೆರವಣಿಗೆಗಳು ಹಾಗೂ ಮಹಾ ರಥೋತ್ಸವ ನಡೆಯುವುದಿಲ್ಲ ಎಂದು ಶ್ರೀಗಳು ತಿಳಿಸಿರುತ್ತಾರೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ವಿಂಧ್ಯಗಿರಿ, ಚಂದ್ರಗಿರಿ ಬೆಟ್ಟಗಳಿಗೆ ಹಾಗೂ ಕ್ಷೇತ್ರದ ಎಲ್ಲ ದೇವಾಲಯಗಳಿಗೆ ಪ್ರವಾಸಿಗರ, ಭಕ್ತಾದಿಗಳ, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಕ್ಷೇತ್ರದಲ್ಲಿ ವಸತಿ ಮತ್ತು ಭೋಜನ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.