ಹಾಸನ: ಉತ್ತರ ಪ್ರದೇಶದಲ್ಲಿ ಇಷ್ಟು ವರ್ಷ ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ನಡೆಯುತಿತ್ತು. ಮೊದಲ ಬಾರಿಗೆ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಕರ್ನಾಟಕ ರೈತ ಸುರಕ್ಷತಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 'ನನ್ನ ಪಾಲಿಸಿ ನನ್ನ ಕೈಯಲ್ಲಿ' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಹಳ ಕಠಿಣ ಎನ್ನುವ ಉತ್ತರ ಪ್ರದೇಶದಲ್ಲೂ ಕೂಡ ಜಯಬೇರಿ ಭಾರಿಸಿರುವುದು ಸಂತೋಷವಾಗಿದೆ. ನಾನು ಅಲ್ಲೆ ಐದಾರು ತಿಂಗಳು ಇದ್ದು, ಪ್ರತಿ ಹಳ್ಳಿಗಳಿಗೆ, ಕ್ಷೇತ್ರಗಳಿಗೆ ಹೋಗಿ ಭೇಟಿ ಮಾಡಿದಾಗ ಅನೇಕ ವಿಚಾರಗಳು ತಿಳಿದು ಬಂದಿದೆ.
ಇಷ್ಟು ವರ್ಷ ಜಾತಿ ಆಧಾರದಲ್ಲಿ, ಧರ್ಮದ ಆಧಾರದಲ್ಲಿ ಚುನಾವಣೆ ನಡೆಯುತಿತ್ತು. ಮೊದಲ ಬಾರಿಗೆ ಅಭಿವೃದ್ಧಿ ಆಧಾರದಲ್ಲಿ ಚುನಾವಣೆಯಲ್ಲಿ ಗೆಲ್ಲಬಹುದು ಎಂಬುದಕ್ಕೆ ಈ ಬಾರಿಯ ಉತ್ತರ ಪ್ರದೇಶದ ಚುನಾವಣೆ ಸಾಕ್ಷಿಯಾಗಿದೆ ಎಂದರು.
'ನನ್ನ ಪಾಲಿಸಿ ನನ್ನ ಕೈಯಲ್ಲಿ' ಎಂಬುದು ಒಂದು ವಿನೂತನ ಕಾರ್ಯಕ್ರಮ. ಕಳೆದ ಆರು ವರ್ಷಗಳಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈತನಿಗೆ ರಕ್ಷಣೆ ಕೊಡುವಂತದ್ದು, ರೈತನಿಗೆ ಸಮಸ್ಯೆ ಆದಾಗ ನೆರವಿಗೆ ಧಾವಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಸುಮಾರು 11 ಕೋಟಿ ರೈತರಿಗೆ 1 ಲಕ್ಷದ 60 ಸಾವಿರ ಕೋಟಿ ಹಣವನ್ನು ಇವತ್ತು ಕೇಂದ್ರ ಸರ್ಕಾರವು ವಿತರಣೆ ಮಾಡಿದ್ದು, ಕರ್ನಾಟಕದಲ್ಲಿಯೂ ರಾಜ್ಯ ಸರ್ಕಾರ ಕೊಡುವ ಕೆಲಸ ಮಾಡುತ್ತಿದೆ ಎಂದರು.
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರುವ ಫಸಲ್ ಭೀಮಾ ಯೋಜನೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ನನ್ನ ಪಾಲಿಸಿ ನನ್ನ ಕೈಯಲ್ಲಿ ಯೋಜನೆ ಅನುಕೂಲ. 75ನೇ ಅಮೃತ ಮಹೋತ್ಸವದಲ್ಲಿ ರೈತರನ್ನು ಒಟ್ಟುಗೂಡಿಸಿ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ರೈತರಿಗೆ ಸಹಾಯವಾಗಲೆಂದು ಔಷಧ ಸಿಂಪಡಣೆ ಮಾಡಲು ಡ್ರೋನ್ ತಯಾರಿಸಲಾಗಿದೆ. ಇದು ಹೆಚ್ಚು ಉಪಯೋಗಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟರು.
ರೈತರಿಗೆ ಪೂರಕವಾದ ಕೃಷಿ ಮಾಡಲು ಆದ್ಯತೆ ನೀಡುತ್ತಿದ್ದು, ಆದಾಯ ಧ್ವಿಗುಣಗೊಳಿಸಲು ಏನೆಲ್ಲಾ ಮಾಡಬಹುದು ಮತ್ತು ಅವರ ಬೆಳೆಯನ್ನು ಇತರ ದೇಶಕ್ಕೆ ಹೇಗೆ ಮಾರ್ಕೆಟಿಂಗ್ ಮಾಡಬಹುದು ಹಾಗೂ ಕೃಷಿಯನ್ನು ಒಂದು ಉದ್ಯಮವಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಯೋಜನೆ ರೂಪಿಸುತ್ತಿದೆ. ರಾಗಿ ಖರೀದಿ ಕೇಂದ್ರ ಹೆಚ್ಚು ಮಾಡಬೇಕು ಎನ್ನುವ ಬೇಡಿಕೆ ಇದ್ದು, ಕೇಂದ್ರ ಸರ್ಕಾರವು ಇದರ ಬಗ್ಗೆ ಗಮನ ಹರಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದರು.
ಇದನ್ನೂ ಓದಿ: ಟ್ರಕ್ - ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ: ವಿಠ್ಠಲನ ಪಾದ ಸೇರಿದ 7 ಭಕ್ತರು, 40ಕ್ಕೂ ಹೆಚ್ಚು ಜನರಿಗೆ ಗಾಯ!