ಹಾಸನ: ಅನುಚಿತವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈಲ್ವೆ ಮಹಿಳಾ ಅಧಿಕಾರಿಯೊಬ್ಬರು ಶಾಸಕನ ವಿರುದ್ಧ ಹರಿಹಾಯ್ದು ಮೇಲಧಿಕಾರಿಗಳಿಗೆ ದೂರು ನೀಡಿದ ಘಟನೆ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.
ಅರಸೀಕೆರೆ ರೈಲು ನಿಲ್ದಾಣದ ಪರಿವೀಕ್ಷಣೆಗೆ ರೈಲ್ವೆ ಉನ್ನತಾಧಿಕಾರಿಗಳು ಮತ್ತು ಮೈಸೂರಿನ ವಿಭಾಗಿಯ ಅಧಿಕಾರಿಗಳು ಆಗಮಿಸಿದ ವೇಳೆ ರೈಲ್ವೇ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ರವರಿಗೆ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕುರಿತು ಶಾಸಕ ಶಿವಲಿಂಗೇಗೌಡ ಮನವಿ ಸಲ್ಲಿಸಿದ್ದರು. ಬಳಿಕ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ತೆರವುಗೊಳಿಸಬೇಕು ಅಂತಹ ಸಾರ್ವಜನಿಕರು ಕೂಡಾ ಮನವಿ ಮಾಡಿದರು.
ಈ ವೇಳೆ ಮೈಸೂರು ವೀಭಾಗಿಯ ರೈಲ್ವೆ ಮಹಿಳಾ ಅಧಿಕಾರಿ ಅಪರ್ಣ ಗರ್ಗ್ ಜೊತೆ ಇಲಾಖೆಯ ಜನರಲ್ ಮ್ಯಾನೇಜರ್ ಮಾತನಾಡುತ್ತಿರುವ ಸಂದರ್ಭದಲ್ಲಿ ಅವರ ಹಿಂಭಾಗದಲ್ಲಿ ನಿಂತಿದ್ದ ಶಾಸಕರ ಕೈ ಆಕಸ್ಮಾತ್ ಅಪರ್ಣ ಅವರ ಭುಜಕ್ಕೆ ತಗುಲಿದ್ದರಿಂದ ಸಿಟ್ಟಿಗೆದ್ದ ಅವರು ಏಕಾಏಕಿ ಶಾಸಕರ ವಿರುದ್ಧ ಹರಿಹಾಯ್ದರು.
ನೀವೊಬ್ಬರು ಶಾಸಕರಾಗಿದ್ದು ನನ್ನೊಂದಿಗೆ ಅನುಚಿತವಾಗಿ ವರ್ತನೆ ಮಾಡುವುದಕ್ಕೆ ನಾಚಿಕೆ ಆಗಲ್ವಾ ಅಂತ ಸಾರ್ವಜನಿಕರ ಎದುರು ಆಂಗ್ಲ ಭಾಷೆಯಲ್ಲಿ ಬೈಯ್ಯುವುದಕ್ಕೆ ಪ್ರಾರಂಭಿಸಿ ಶಾಸಕರನ್ನ ತರಾಟೆಗೆ ತೆಗೆದುಕೊಂಡರು.
ಇದರಿಂದ ಮುಜುಗರಕ್ಕೆ ಒಳಗಾದ ಶಾಸಕರು, ನಾನು ಬೇಕು ಅಂತ ಮಾಡಲಿಲ್ಲ. ನನ್ನ ಹಿಂಬದಿ ಇದ್ದ ಕೆಲವರು ನೂಕಾಟ ಮಾಡಿದ್ದರಿಂದ ನನಗೆ ತಿಳಿಯದಂತೆ ತಮ್ಮ ಭುಜಕ್ಕೆ ನನ್ನ ಕೈ ತಾಕಿರಬಹುದು. ನನಗೆ ತಿಳಿಯದೆ ಆಗಿದೆ. ಆದರೆ ನಾನು ನಿಮ್ಮೊಂದಿಗೆ ಅನುಚಿತವಾಗಿ ವರ್ತನೆ ಮಾಡಿಲ್ಲ. ಹಾಗೇನಾದರು ತಮ್ಮ ದೃಷ್ಟಿಯಲ್ಲಿ ನಾನು ತಪ್ಪು ಮಾಡಿದ್ದೇನೆ ಅಂತ ಅನಿಸಿದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಸ್ಥಳದಲ್ಲಿಯೇ ಎಲ್ಲರೆದುರು ಕ್ಷಮೆ ಕೇಳಿ ಅಲ್ಲಿಂದ ಹೊರಟೇ ಬಿಟ್ಟರು.
ಒಟ್ಟಾರೆ ರೈಲ್ವೆ ಅಭಿವೃದ್ಧಿ ವಿಚಾರವಾಗಿ ಆಗಮಿಸಿದ್ದ ಅಧಿಕಾರಿಗಳು ಸಂಬಂಧಪಟ್ಟವರನ್ನು ಮಾತ್ರ ಸ್ಥಳಕ್ಕೆ ಆಹ್ವಾನಿಸದೆ ಸಾರ್ವಜನಿಕರನ್ನು ಆಹ್ವಾನಿಸಿದ್ದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಇಂತಹದೊಂದು ಪ್ರಮಾದ ಜರಗಿದ್ದು, ಇದು ರೈಲ್ವೆ ಪೊಲೀಸರ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ.