ಹಾಸನ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಂಗಳೂರು ಮತ್ತು ಮಂಗಳೂರು ರಸ್ತೆ ಬಿರುಕು ಬಿಟ್ಟು ಭೂ-ಕುಸಿತವಾಗಿದೆ. ಹೀಗಾಗಿ ಜಿಲ್ಲಾಡಳಿತ 4 ದಿನಗಳ ಕಾಲ ರಸ್ತೆ ಬಂದ್ ಮಾಡುವುದಾಗಿ ತಿಳಿಸಿದ್ದು, ತಾತ್ಕಾಲಿಕವಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಅಕ್ಷರಶಃ ಮಲೆನಾಡು ಭಾಗ ನಲುಗಿ ಹೋಗಿದೆ. ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಭಾರಿ ಮಳೆ, ಗಾಳಿಗೆ ಈಗಾಗಲೇ 6ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದು, ಇಂದು ಕೂಡ ಮಂಗಳೂರು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಬಳಿ ರಸ್ತೆ ಬಿರುಕು ಬಿಟ್ಟಿದೆ. ಹೀಗಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ರಸ್ತೆಯಲ್ಲಿ ಮಳೆಯ ನೀರು ಹರಿಯುತ್ತಿದ್ದು, ತೇವಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ಸಕಲೇಶಪುರ ದೋಣಿಗಾಲ್ ಬಳಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದೆ. ಮೊನ್ನೆ ಮೊನ್ನೆಯಷ್ಟೆ ರಸ್ತೆ ಕುಸಿತ ಎಂಬ ಸುದ್ದಿಯನ್ನು 'ಈಟಿವಿ ಭಾರತ' ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಈಗ ಹೆದ್ದಾರಿಯೇ ಕುಸಿದಿದೆ. ಹೀಗಾಗಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದು, ಪರ್ಯಾಯ ಮಾರ್ಗದಲ್ಲಿಯೂ ಹೋಗಲು ಸಾಕಷ್ಟು ಶ್ರಮಪಡುವ ಸ್ಥಿತಿ ನಿರ್ಮಾಣವಾಗಿದೆ.
ವರದಿ ಪ್ರಕಟಿಸಿದ್ರೂ ಎಚ್ಚೆತ್ತುಕೊಳ್ಳದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಮತ್ತು ವಾಹನ ಸವಾರರು ಹಾಗೂ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಕುಸಿತದಿಂದ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೆಂಗಳೂರು ಮತ್ತು ಮಂಗಳೂರು ತಲುಪುವ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಕಳುಹಿಸುವ ವ್ಯವಸ್ಥೆಗೆ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಚಿಂತನೆ ನಡೆಸುತ್ತಿವೆ.
ಸ್ಥಳಕ್ಕೆ ಸಕಲೇಶಪುರದ ತಹಶೀಲ್ದಾರ್ ಹೆಚ್. ಬಿ. ಜಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ರಸ್ತೆ ದುರಸ್ತಿಯಾಗುವ ತನಕ ಹಾಸನ-ಮಂಗಳೂರು ಹೆದ್ದಾರಿ ಬಂದ್ ಆಗಲಿದೆ. ಈ ಮಾರ್ಗದಲ್ಲಿ ಸಂಚಾರ ಮಾಡುವ ಬೆಂಗಳೂರು ಮತ್ತು ಮಂಗಳೂರು ಪ್ರಯಾಣಿಕರಿಗೆ ವಾಹನಗಳಿಗೆ ತೊಂದರೆಯಾಗಲಿದೆ.
ಜಿಲ್ಲಾಡಳಿತ ಸಹ ನಾಲ್ಕು ದಿನದ ಮಟ್ಟಿಗೆ ರಸ್ತೆಯನ್ನು ಬಂದ್ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಸಕಲೇಶಪುರದಲ್ಲಿ ಇಂದು 126 ಮಿ.ಮೀ. ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.