ಹಾಸನ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಶಾಲೆಯ ಮುಖ್ಯ ಶಿಕ್ಷಕನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಶಾಲೆಯೊಂದರ ಮುಖ್ಯ ಶಿಕ್ಷಕ ನರೇಂದ್ರನ್, 10ನೇ ತರಗತಿ ವಿದ್ಯಾರ್ಥಿನಿಯನ್ನು ಪದೇ ಪದೆ ತಮ್ಮ ಕಚೇರಿಗೆ ಕರೆಸಿ ಕಸ ಗುಡಿಸಲು ಹೇಳುವುದರ ಜೊತೆಗೆ ವಿದ್ಯಾರ್ಥಿನಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಅರ್ಧವಾರ್ಷಿಕ ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿನಿಯನ್ನು ಮತ್ತೇ ಕಚೇರಿಗೆ ಕರೆದು ಕೈ ಹಿಡಿದು ಮುತ್ತು ಕೊಡಲು ಮುಂದಾಗಿದ್ದ ಎನ್ನಲಾಗಿದೆ.
ಘಟನೆಯಿಂದ ನೊಂದ ವಿದ್ಯಾರ್ಥಿನಿ ಭಯದಿಂದ ಈ ವಿಷಯವನ್ನು ಪೋಷಕರಿಗೆ ಹೇಳದೇ ತನ್ನ ಕೆಲವು ಸಹಪಾಠಿಗಳೊಂದಿಗೆ ಈ ಬಗ್ಗೆ ಹೇಳಿಕೊಂಡಿದ್ದಾಳೆ. ನಂತರ ವಿದ್ಯಾರ್ಥಿನಿ ತನ್ನ ತಾಯಿ ಮತ್ತು ಚಿಕ್ಕಪ್ಪನಿಗೆ ವಿಷಯ ತಿಳಿಸಿದ್ದಾಳೆ. ವಿದ್ಯಾರ್ಥಿನಿಯ ಪೋಷಕರು ಮುಖ್ಯ ಶಿಕ್ಷಕನನ್ನು ಪ್ರಶ್ನಿಸಿ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದಾರೆ. ಠಾಣೆಗೆ ಬರಲು ನಿರಾಕರಿಸಿದ ನರೇಂದ್ರನ್ಗೆ ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನು ವಿದ್ಯಾರ್ಥಿನಿ ಹಾಗೂ ಸಂಬಂಧಿಕರು ಠಾಣೆಗೆ ತೆರಳದ ಕಾರಣ ಬೇಲೂರು ಜಿಲ್ಲಾ ನಿರೀಕ್ಷಕ ರವಿಕಿರಣ್, ಪಿಎಸ್ಐ ಎಸ್.ಜಿ.ಪಾಟೀಲ್ ವಿದ್ಯಾರ್ಥಿನಿಯ ಮನೆಗೆ ತೆರಳಿ ಮಾಹಿತಿ ಪಡೆದು, ಪ್ರಕರಣ ದಾಖಲಿಸಿಕೊಂಡು ಆರೋಪಿ ಶಿಕ್ಷಕನನ್ನು ನ್ಯಾಯಾಂಗ ಇಲಾಖೆಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಬಾಲಾಪರಾಧಿ ಗೃಹದಲ್ಲಿ ದುಷ್ಕೃತ್ಯ: ಇಬ್ಬರು ಹುಡುಗರ ಮೇಲೆ ಲೈಂಗಿಕ ದೌರ್ಜನ್ಯ