ಹಾಸನ: ರೇವಣ್ಣ ಅವರಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ. ನಾಲ್ಕು ಬಿಲ್ಡಿಂಗ್ ಕಟ್ಟೋದನ್ನೇ ಶಿಕ್ಷಣ ಅನ್ಕೊಂಡಿದ್ದಾರೆ. ಅವರಿಗೆ ಯಾವ ರೀತಿ ಕೆಲಸ ಮಾಡಬೇಕು ಮತ್ತು ಸುಧಾರಣೆ ಮಾಡಬೇಕೆಂಬ ಕಲ್ಪನೆ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಟೀಕಿಸಿದರು.
ಹಾಸನದಲ್ಲಿ ಮಾತನಾಡಿದ ಅವರು, ರೇವಣ್ಣ ಬಹಳ ದಕ್ಷ, ಪ್ರಾಮಾಣಿಕ, ಸ್ವಜನಪಕ್ಷಪಾತವಿಲ್ಲದೆ ಪಾರದರ್ಶಕವಾಗಿ ಕೆಲಸ ಮಾಡಿರುವವರು. ಅವರ ವಿಚಾರ ಏನು ಅಂತ ಅವರ ಊರಿನವರಿಗೆ, ಜೊತೆಯಲ್ಲಿರುವವರಿಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ನನ್ನ ವಿಚಾರದಲ್ಲಿ ಮಾತನಾಡುವ ನೈತಿಕತೆ, ಬದ್ಧತೆ, ಅರ್ಹತೆ ಅವರಿಗಿಲ್ಲ. ನನ್ನ ಬಗ್ಗೆ ಹೇಳಿಕೆ ಕೊಡಲು ಅವರು ಒಳ್ಳೆಯ ಕಲ್ಪನೆ, ವಿಚಾರಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸಹಾಯಕ ಪ್ರಾಧ್ಯಾಪಕರು ಹಾಗೂ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರವಾಗಿ ಮಾತನಾಡುತ್ತಾ, ಈಗಾಗಲೇ ದೂರು ದಾಖಲು ಮಾಡಿದ್ದಾರೆ. ವಿಚಾರಣೆ ನಡೆಯುತ್ತಿದೆ, ನಂತರ ಕ್ರಮ ತೆಗೆದುಕೊಳ್ಳಲಾಗುವುದು. ಇದರಲ್ಲಿ ಗೃಹ ಸಚಿವರ ವೈಫಲ್ಯ ಇಲ್ಲ. ಅವರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಯಾರೇ ತಪ್ಪು ಮಾಡಿದರು ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ಕೊಟ್ಟರು.
ಇದನ್ನೂ ಓದಿ: ನೀವು ಡಿಜಿಟಲ್ ಪಾವತಿಯನ್ನೇ ಅವಲಂಬಿಸಿದ್ದೀರಾ? ಈ ಎಚ್ಚರಿಕೆಗಳನ್ನು ಕಡ್ಡಾಯ ಪಾಲಿಸಿ..