ಹಾಸನ: ಡಿಸೆಂಬರ್ 4ರಂದು ಕೆಲ ಯುವಕರುಗಳು ಮಾಡಿದ ಎಡವಟ್ಟಿನಿಂದ ಶ್ರವಣೂರು ಗ್ರಾಮದಲ್ಲಿ ಅಶಾಂತಿ ನಿರ್ಮಾಣವಾಗಿತ್ತು. ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ಎಸ್ಪಿ ಅವರೇ ತಿಳಿಗೊಳಿಸಿದ್ದಾರೆ. ಸ್ಥಳಕ್ಕೆ ಕಾಗಿನೆಲೆ ಮಠದ ಸ್ವಾಮೀಜಿ ಆಗಮಿಸಿ ಅವರ ನೇತೃತ್ವದಲ್ಲಿಯೇ ಪ್ರತಿಮೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸುವ ಕಾರ್ಯವನ್ನು ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕಿಕ್ಕೇರಿ ಹಾಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಹೊಳೆನರಸೀಪುರ ಸಂಪರ್ಕ ಕಲ್ಪಿಸುವ ಶ್ರವಣೂರು ಗ್ರಾಮದ ಪ್ರಮುಖ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣನ ಫ್ಲೆಕ್ಸ್ ಹಾಕಲಾಗಿತ್ತು. ಈ ಹಿನ್ನೆಲೆ ಕಳೆದ ಕೆಲ ದಿನಗಳಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಸದ್ಯ ಎಸ್ಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಕಾರ್ಯ ಮಾಡಲಾಗಿದೆ. ಸ್ಥಳಕ್ಕೆ ಕೆಆರ್ ನಗರದ ಕಾಗಿನೆಲೆ ಮಠದ ಡಾ. ಶಿವಪುರಿ ಶಿವಾನಂದ ಸ್ವಾಮೀಜಿ ಅವರು, ಆಗಮಿಸಿ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಸಮಾಜದ ಕೆಲವು ಮುಖಂಡರುಗಳು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಫ್ಲೆಕ್ಸ್ ಹಾಕಿದ್ದು, ಎರಡು ಕೋಮಿನ ನಡುವೆ ಅಶಾಂತಿ ನಿರ್ಮಾಣವಾಗಲು ಕಾರಣವಾಗಿದೆ. ಇದು ಸಮಾಜದ ಶಾಂತಿ ಕದಡುವ ವಿಚಾರ. ಈ ರೀತಿಯ ಕಾರ್ಯ ಮಾಡಿದ್ದು ತಪ್ಪು. ಅವರಿಗೆ ನ್ಯಾಯಾಲಯದ ಕೆಲ ಆದೇಶಗಳು ಮತ್ತು ನೀತಿ ನಿಯಮಗಳು ಅರಿವಿಲ್ಲದೇ ಇರುವುದರಿಂದ ಈ ರೀತಿ ಆಗಿದೆ ಎಂದರು.
ಆದರೆ, ಸಂಗೊಳ್ಳಿ ರಾಯಣ್ಣ ದೇಶಭಕ್ತ. ಸಮಾಜಕ್ಕಾಗಿ ಅವರ ಕೊಡುಗೆ ಅಪಾರ. ಹಾಗಾಗಿ ಅದನ್ನು ತೆರವುಗೊಳಿಸುವುದು ನಮಗೂ ಕೂಡ ಮನಸ್ಸಿಗೆ ತುಂಬಾ ನೋವಾಗುತ್ತದೆ. ಸಮಾಜದಲ್ಲಿ ಶಾಂತಿ ನಿರ್ಮಾಣಕ್ಕಾಗಿ ತಾತ್ಕಾಲಿಕವಾಗಿ ಇದನ್ನು ತೆರಳುಗೊಳಿಸುವ ಕಾರ್ಯ ಮಾಡಿದ್ದು, ಮುಂದಿನ ದಿನಗಳಲ್ಲಿ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಶಿವಪುರಿ ಶಿವಾನಂದ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: 'ನಾ ಯಾರ ವಿಚಾರಕ್ಕೂ ಹೋಗಲ್ಲ, ನನ್ನ ಉಸಾಬರಿಗೆ ಬಂದ್ರೆ ಸುಮ್ಮನೆ ಬಿಡುವುದಿಲ್ಲ'