ಹಾಸನ: ಕೊರೊನಾ ಲಾಕ್ಡೌನ್ ಒಂದಿಷ್ಟು ವರ್ಗದ ಜನರನ್ನು ಕೊರಗುವಂತೆ ಮಾಡಿದ್ರೆ, ಮತ್ತೊಂದಿಷ್ಟು ಜನರನ್ನು ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳಲು ಪ್ರೋತ್ಸಾಹ ನೀಡುತ್ತಿದೆ.
ಲಾಕ್ಡೌನ್ ಇಲ್ಲೋರ್ವ ರೈತನಿಗೆ ಜೇನು ಕೃಷಿ ಮಾಡೋ ಅವಕಾಶ ಸೃಷ್ಟಿಸಿದೆ. ಕಾಡಿನಲ್ಲಿ ಜೇನು ಹಿಡಿದು ಹೇಗೆ ಸಾಕೋದು ಅನ್ನೋದನ್ನ ಈ ವ್ಯಕ್ತಿ ಕರಗತ ಮಾಡಿಕೊಂಡಿದ್ದಾರೆ. ಎರಡನೇ ಅಲೆಯ ಕೊರೊನಾ ಲಾಕ್ಡೌನ್ ಜನರನ್ನ ಹಾಗೂ ಗ್ರಾಮೀಣ ಭಾಗದ ರೈತರನ್ನ ಎಲ್ಲೂ ಅಡ್ಡಾಡದಂತೆ ಕಟ್ಟಿ ಹಾಕಿದೆ. ಆದ್ರೆ ಇದೇ ಲಾಕ್ಡೌನ್ ಕೆಲವರಿಗೆ ಹೊಸ ಹೊಸತನ್ನು ಕಲಿಯಲು ಉತ್ತೇಜಿಸಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೀನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ಇಂದ್ರಶೇಖರ್ ಎಂಬುವರು ಲಾಕ್ಡೌನ್ ಕಾರಣದಿಂದ ಈಗ ಜೇನು ಕೃಷಿಯಲ್ಲಿ ತಲ್ಲೀನರಾಗಿದ್ದಾರೆ. ತಾವು ಬಾಲ್ಯದಿಂದ ಕೆಲಕಾಲ ಮಾಡಿ ಕೈ ಬಿಟ್ಟಿದ್ದ ಜೇನು ಕೃಷಿಯನ್ನ ಈಗ ಪುನಃ ಆರಂಭಿಸಿ ಕೊಂಚ ಮಟ್ಟಿಗೆ ಯಶಸ್ವಿ ಕೂಡ ಆಗಿದ್ದಾರೆ.
ಬಿಡುವಿನ ವೇಳೆಯಲ್ಲಿ ತಮ್ಮ ಮಲೆನಾಡಿನ ಕಾಡುಮೇಡು, ಕಾಫಿ ತೋಟವನ್ನ ಅಲೆದು ಅಲ್ಲಿ ಬೈನೆ ಮರ ಮತ್ತು ಇತರೆ ಮರದ ಪೊಟರೆಯಲ್ಲಿ ಗೂಡುಕಟ್ಟಿದ ಜೇನನ್ನ ಹಿಡಿಯುವ ಕಾಯಕ ಮಾಡಿದ್ದಾರೆ. ಹೀಗೆ ಪೊಟರೆ ಮಣ್ಣಿನ ಗೆರೆಯಲ್ಲಿರೋ ಜೇನು ಹಿಡಿದು ಅಲ್ಲಿ ಸಿಕ್ಕ ಜೇನನ್ನ ಪಡೆದು ನಂತರ ಅವುಗಳನ್ನೇ ತಮ್ಮ ಜೇನು ಸಾಕಾಣೆ ಪೆಟ್ಟಿಗೆಗೆ ತುಂಬಿಸಿ ಜೇನು ಕೃಷಿ ಮಾಡ್ತಿದ್ದಾರೆ.
ಜೇನುಗೂಡನ್ನು ಕಟ್ಟಿಸುವ ಮತ್ತು ಹಿಡಿಯುವ ಕೆಲಸ ಬಹಳ ಸೂಕ್ಷ್ಮ ಕೆಲಸವಾಗಿದ್ದು, ಕೊಂಚ ತಾಳ್ಮೆ ತಪ್ಪಿದ್ರು ಅಪಾಯವನ್ನು ತಂದಿಡುತ್ತದೆ. ಜೇನು ಕೃಷಿ ಚಟುವಟಿಕೆ ಶ್ರಮದ ಕೆಲಸವಾದ ಕಾರಣ ಸರಿಯಾದ ಕ್ರಮದಲ್ಲಿ ಜೇನು ಹಿಡಿದು ಪೆಟ್ಟಿಗೆಗೆ ತುಂಬಿಸೋ ಕೆಲಸ ಮಾಡುವವರು ಈಗ ಕಡಿಮೆ ಆಗಿದ್ದಾರೆ. ಹೊಸ ತಲೆಮಾರಿನ ಯುವಕರಲ್ಲಿ ಈ ಜೇನು ಹಿಡಿದು ಸಾಕುವ, ಪೆಟ್ಟಿಗೆಗೆ ತುಂಬಿಸೋ ಕಾಯಕವನ್ನು ಕಲಿತಿರುವವರು ತುಂಬಾನೇ ವಿರಳ. ಅಂತದರಲ್ಲಿ ಇಂದ್ರಶೇಖರ್ ತನ್ನ ಕುಟುಂಬಸ್ಥರೊಬ್ಬರು ಹೇಳಿಕೊಟ್ಟ ಜೇನು ಕೃಷಿಯನ್ನು ಪುನಃ ಆರಂಭಿಸಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ತಾವು ಸಂಗ್ರಹಿಸಿದ ಜೇನನ್ನ ಇವರು ಮಾರಾಟ ಮಾಡಿ ಅಲ್ಪ ಸ್ವಲ್ಪ ಹಣವನ್ನು ಸಂಪಾದಿಸಿದ್ದಾರೆ. ಮನುಷ್ಯನ ಶ್ವಾಸ ಸಂಬಂಧಿ ಕಾಯಿಲೆ ನಿವಾರಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸೋ ಅದ್ಭುತ ಶಕ್ತಿಯನ್ನ ಜೇನು ಹೊಂದಿದೆ. ಆದ್ರೆ ಉತ್ತಮ ಗುಣಮಟ್ಟದ ಜೇನು ಸಿಗೋದು ಕಷ್ಟಸಾಧ್ಯ. ಸದ್ಯ ಕಾಡು ನಾಶವಾಗುತ್ತಿರೋ ಕಾಲದಲ್ಲಿ ಜೇನು ಸಂತತಿಯೂ ನಶಿಸುತ್ತಾ ಬಂದಿದೆ. ಹೀಗಿರುವಾಗ ಲಾಕ್ಡೌನ್ನಿಂದ ದೊರೆತ ಸಮಯ ಇಂದ್ರಶೇಖರ್ ಅವರನ್ನು ಜೇನು ಕೃಷಿ ಮಾಡಲು ಪ್ರೇರೇಪಿಸಿ ಬದುಕಿಗೆ ಮತ್ತೊಂದು ಆಸರೆಯಾಗಿದೆ.