ಸಕಲೇಶಪುರ: ರಂಜಾನ್ ಹಬ್ಬದ ರಜೆ ಇದ್ದರೂ ಜಾರ್ಖಂಡ್ ಹಾಗೂ ಉತ್ತರಪ್ರದೇಶ ಮೂಲದ ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ತಾಲೂಕು ಆಡಳಿತ ಇಂದು ಅವರ ತವರು ರಾಜ್ಯಗಳಿಗೆ ಕಳುಹಿಸಲು ಕ್ರಮ ಕೈಗೊಂಡಿತು.
ತಾಲೂಕಿನ ಕೆಲವು ಕಾಫಿ ತೋಟಗಳಲ್ಲಿ ಹಾಗೂ ಎತ್ತಿನಹೊಳೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಹಾಗೂ ಉತ್ತರ ಪ್ರದೇಶ ಮೂಲದ ಒಟ್ಟು 139 ಕೂಲಿ ಕಾರ್ಮಿಕರನ್ನು ತಾಲೂಕು ಆಡಳಿತ 6 ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕಳುಹಿಸಿ ಕೊಟ್ಟಿತು. ಲಾಕ್ ಡೌನ್ ಆತಂಕದಲ್ಲಿದ್ದ ಈ ಕಾರ್ಮಿಕರು ಊರಿಗೆ ಹೋಗಲು ಅವಕಾಶ ಸಿಕ್ಕಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತಕ್ಕೆ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು.
ರಂಜಾನ್ ಹಬ್ಬದ ರಜೆ ಇದ್ದರೂ ತಾಲೂಕು ಆಡಳಿತ ಕೆಲಸ ಮಾಡಿದ ಪರಿಣಾಮ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವಂತಾಯಿತು. ತಾಲೂಕಿನಲ್ಲಿ ಸುಮಾರು 1,500ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಉತ್ತರಪ್ರದೇಶ, ಅಸ್ಸೋಂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ, ಜಾರ್ಖಂಡ್, ಉತ್ತರಪ್ರದೇಶ, ಬಿಹಾರ ಸೇರಿದಂತೆ ವಿವಿಧೆಡೆಗಳಿಗೆ ಹೋಗಲು ಹೆಸರನ್ನು ನೋಂದಾಯಿಸಿದ್ದು, ಬಹುತೇಕರು ಈಗಾಗಲೆ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದಾರೆ. ಇನ್ನು ಬಾಕಿ ಉಳಿದಿರುವ 500 ಮಂದಿಯನ್ನು ಮಾತ್ರ ಕಳುಹಿಸಲು ವ್ಯವಸ್ಥೆಯಾಗಬೇಕಾಗಿದೆ.
ಈ ಸಂದರ್ಭ ತಹಶೀಲ್ದಾರ್ ಮಂಜುನಾಥ್, ಉಪತಹಶೀಲ್ದಾರ್ ಕೃಷ್ಣಮೂರ್ತಿ, ಹಿರಿಯ ಕಾರ್ಮಿಕ ಅಧೀಕ್ಷಕ ಅಕ್ಬರ್ ಮುಲ್ಲಾ, ಡಿವೈಎಸ್ಪಿ ಗೋಪಿ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.