ಹಾಸನ : ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಶ್ರವಣಬೆಳಗೊಳ ಹೋಬಳಿಯ ಹಡೇನಹಳ್ಳಿ ಗ್ರಾಮದ ಹರೀಶ್ (32) ಕೊಲೆಯಾದ ರೌಡಿಶೀಟರ್.
ಚನ್ನರಾಯಪಟ್ಟಣ ಧನಲಕ್ಷ್ಮಿ ಥಿಯೇಟರ್ ಎದುರು ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ, ಕತ್ತನ್ನು ಕೊಯ್ದು ಬರ್ಬರವಾಗಿ ಕೊಲೆಗೈದಿದ್ದಾರೆ. ಜಿನ್ನನಾಥಪುರದ ನವೀನ್ ಅಲಿಯಾಸ್ ಬ್ಯಾಟರಿ ಎಂಬುವನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹರೀಶ್ ಜೈಲಿಗೆ ಹೋಗಿದ್ದ. ಇತ್ತೀಚಿಗಷ್ಟೇ ಪೆರೋಲ್ ಮೇಲೆ ಹೊರಬಂದಿದ್ದ.
2017ರಲ್ಲಿ ಬ್ಯಾಟರಿ ಅಲಿಯಾಸ್ ನವೀನ ಎಂಬುವನ ಕೊಲೆ ಪ್ರಕರಣದಲ್ಲಿ ಭಾಗಿಯಾದ್ದ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿದ್ದ ಹರೀಶ್ ಕೆಲಸದ ನಿಮಿತ್ತ ಶ್ರವಣಬೆಳಗೊಳಕ್ಕೆ ಬಂದಿದ್ದ. ಜೈಲಿನಿಂದ ಹೊರಬರುವುದನ್ನೇ ಕಾಯುತ್ತಿದ್ದ ನವೀನ್ ಸ್ನೇಹಿತರು ಹರೀಶ್ ಜೊತೆ ರಾಜಿ ಮಾಡಿಕೊಳ್ಳುವ ನಾಟಕವಾಡಿ, ಮನವೊಲಿಸಿ ಬಾರ್‌ಗೆ ಕರೆತಂದಿದ್ದರು. ಕಂಠಪೂರ್ತಿ ಕುಡಿಸಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂಬುದು ಸಂಬಂಧಿಕರ ಆರೋಪ. ಸ್ಥಳಕ್ಕೆ ಎಸ್ಪಿ ಪ್ರಕಾಶ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.