ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಸಂತೆಮರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಇಳ್ಳಹಳ್ಳಿ ಗ್ರಾಮದ ಕಲ್ಯಾಣಿಯನ್ನು ಆರ್.ಕೆ. ಪದ್ಮನಾಭ ಅಭಿಮಾನಿ ಬಳಗದಿಂದ ಸ್ವಚ್ಛಗೊಳಿಸಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಟ್ಟಣ ಪಂಚಾಯತ್ ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಆರ್.ಕೆ. ಪದ್ಮನಾಭ ಅಭಿಮಾನಿಗಳ ಬಳಗದ ವತಿಯಿಂದ ತಾಲೂಕಿನ ಕಲ್ಯಾಣಿಗಳು ನೀರು ಹಿಡಿದಿಡಲು ಅನುಕೂಲವಾಗುವ ರೀತಿ ಸ್ವಚ್ಛಗೊಳಿಸಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ನೀರಿನ ಸಮಸ್ಯೆ ಇಲ್ಲದಿರುವ ಕಾರಣ ನೀರಿನ ಕೊರತೆ ಬಗ್ಗೆ ಜನರಿಗೆ ತಿಳಿದಿಲ್ಲ. ಬೇರೆಡೆ ಸಾವಿರಾರು ಅಡಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ಸಿಕ್ಕ ಅಲ್ಪ ಸ್ವಲ್ಪ ನೀರು ಫ್ಲೋರೈಡ್ ನೀರಾಗಿದ್ದು, ಆ ನೀರು ಉಪಯೋಗಿಸಲು ಯೋಗ್ಯವಾಗಿಲ್ಲ. ಇದಕ್ಕೆ ಮೂಲ ಕಾರಣ ಅಂತರ್ಜಲ ಮಟ್ಟ ಕುಸಿತ ಎಂದು ವಿವರಿಸಿದರು.
ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ತಾಲೂಕಿನಾದ್ಯಂತ ಇರುವ ಕಲ್ಯಾಣಿಗಳು, ಕುಂಟೆಗಳು, ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಶುಚಿಗೊಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು. ತಾಲೂಕಿನ ಹಳ್ಳಿಯ ಕಲ್ಯಾಣಿಯು ಸುಮಾರು 100-200 ವರ್ಷಗಳ ಇತಿಹಾಸ ಹೊಂದಿದೆ ಎಂದು ಮಾಹಿತಿ ನೀಡಿದರು.