ಹಾಸನ: ಕಳೆದ ಎರಡೂವರೆ ವರ್ಷಗಳಿಂದ ಕೋವಿಡ್-19 ನಿಂದಾಗಿ ರೈತರು ಬಸವಳಿದಿದ್ದರು. ಇದೀಗ ಮತ್ತೆ ವರುಣನ ಆರ್ಭಟದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ಬೆಳೆ ಹಾನಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಹಾಸನ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಅಧಿಕಾರಿಗಳು ಅಂದಾಜು ಮಾಡಿರುವ ಪ್ರಕಾರ ಸುಮಾರು 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ರಾಗಿ, ಭತ್ತ, ಜೋಳ, ಕಾಫಿ, ಏಲಕ್ಕಿ, ಮೆಣಸು ಸೇರಿದಂತೆ ಎಲ್ಲ ಬೆಳೆಗಳು ಹಾಳಾಗಿದ್ದು, ಜಿಲ್ಲೆಯ ರೈತರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.
ನಿನ್ನೆ ಕಂದಾಯ ಸಚಿವ ಆರ್. ಅಶೋಕ್ ಅರಕಲಗೂಡು ತಾಲೂಕಿನ ರಾಮನಾಥಪುರ, ಸಂತೆಮರೂರು ಹಾಗೂ ಚನ್ನರಾಯಪಟ್ಟಣದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಬೆಳೆ ನಷ್ಟವಾಗಿರುವ ರೈತರ ದಾಖಲಾತಿಗಳನ್ನು ಕ್ರೋಢೀಕರಿಸಿ ವಾರದೊಳಗೆ ಅವರ ಖಾತೆಗಳಿಗೆ ಹಣ ಸಂದಾಯವಾಗುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅರಕಲಗೂಡು ತಾಲೂಕಿನಲ್ಲಿ ಸುಮಾರು ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ರಾಗಿ ಸಂಪೂರ್ಣವಾಗಿ ಹಾಳಾಗಿದ್ದು, ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡುತ್ತೇನೆ ಎಂದರು.
ಇದನ್ನೂ ಓದಿ:ಮುರುಡೇಶ್ವರದ ಶಿವನ ಮೂರ್ತಿ ಮೇಲೆ ಉಗ್ರರ ಕಣ್ಣು: ಭದ್ರತೆ ಹೆಚ್ಚಿಸಿದ ಪೊಲೀಸ್ ಇಲಾಖೆ
ರಾಜ್ಯದಲ್ಲಿ ಮಳೆಯಿಂದಾಗಿ ಸುಮಾರು 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಸನದಲ್ಲಿ ಆ ರೀತಿಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ರಾಜ್ಯದಲ್ಲಿ 5 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, ಪ್ರತಿ ಜಿಲ್ಲೆಯ ಅಧಿಕಾರಿಗಳಿಗೆ ಖುದ್ದು ಸಮೀಕ್ಷೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.
ಇನ್ನು ಮುಂದಿನ ವಾರದಲ್ಲಿ ತಮಿಳುನಾಡಿನಲ್ಲಿ ಮತ್ತೊಂದು ಸೈಕ್ಲೋನ್ ಎದುರಾಗಲಿದ್ದು, ಮತ್ತೆ ಭಾರಿ ಪ್ರಮಾಣದ ಮಳೆಯಾಗಲಿದೆ. ರೈತ ಬೆಳೆದ ಯಾವುದೇ ಬೆಳೆ ಹಾನಿಗೊಳಗಾದರೆ ಅದಕ್ಕೆ ಸರ್ಕಾರ ಪರಿಹಾರ ನೀಡಲು ಬದ್ಧವಿದೆ. ಆದರೆ, ಶೇಕಡಾ 30 ಕಡಿಮೆ ಕಾಫಿ ಬೆಳೆ ನಾಶವಾಗಿದ್ದರೆ, ಅದಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುವುದು ಅದಕ್ಕಿಂತ ಹೆಚ್ಚು ಒಳಗಾಗಿದ್ದರೆ ಅದಕ್ಕೆ ಕೇಂದ್ರ ಸರ್ಕಾರವೇ ಪರಿಹಾರ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಪರಿಹಾರ ನೀಡುತ್ತಿದ್ದು, ಈಗಾಗಲೇ 300 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: Drug war: ಮೂವರನ್ನು ಕೊಂದು, ಹೆಣಗಳನ್ನು ನೇತುಹಾಕಿದ್ದು ಯಾಕೆ ಗೊತ್ತಾ?
ಈ ಕುರಿತು ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡ ರೈತ ಮುಖಂಡ ಸಿಂಬಳ್ಳಿ ಯೋಗಣ್ಣ, ಆರ್. ಅಶೋಕ್ ನಮ್ಮ ಭಾಗಕ್ಕೆ ಬಂದು ಹಾನಿಗೊಳಗಾದ ರಾಗಿ, ಕಾಫಿ, ಮತ್ತು ಇನ್ನಿತರ ಬೆಳೆಗಳನ್ನು ವೀಕ್ಷಣೆ ಮಾಡಿದ್ದಾರೆ. ನಾವು ಒಂದು ಎಕರೆಗೆ ಕನಿಷ್ಠ 15 ರಿಂದ 20 ಸಾವಿರ ರೂ. ಖರ್ಚು ಮಾಡಿರುತ್ತೇವೆ. ಆದರೆ, ಸರ್ಕಾರಕ್ಕೆ ಮಾತ್ರ ಸಾವಿರ ರೂ. ನಲ್ಲಿ ಪರಿಹಾರ ನೀಡುತ್ತಿದೆ. ಇದು ನಮಗೆ ಸಾಕಾಗುವುದಿಲ್ಲ, ದಯಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತ ಕಾಯಬೇಕು. ಕನಿಷ್ಠ ಮೂರು ಪಟ್ಟಾದರೂ ಪರಿಹಾರ ಬಿಡುಗಡೆಗೊಳಿಸಿದ್ರೆ ನಮ್ಮ ಬದುಕು ಹಸನಾಗುತ್ತದೆ ಎಂದರು.
ಇದನ್ನೂ ಓದಿ: ಅಕಾಲಿಕ ಮಳೆಗೆ ಭತ್ತದ ಬೆಳೆ ಹಾನಿ: ಸೂಕ್ತ ಪರಿಹಾರಕ್ಕೆ ರೈತರು ಮನವಿ