ಹಾಸನ : ಸರ್ಕಾರದ ಕಾಮಗಾರಿಗಳನ್ನು ಮಾಡುವ ಮೂಲಕ ಗುತ್ತಿಗೆದಾರರ ಹೆಂಡತಿಯ ಮಾಂಗಲ್ಯಸರ ಮಾರ್ವಾಡಿ ಪಾಲಾಗುತ್ತಿದೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ವ್ಯಂಗ್ಯವಾಡಿದ್ದಾರೆ.
ಹಾಸನದ ಪ್ರವಾಸಿಮಂದಿರದಲ್ಲಿ ಮಾತನಾಡಿದ ಅವರು, ಕಳೆದ 12 ತಿಂಗಳ ಹಿಂದೆ ಮುಗಿಸಿರುವ ಕಾಮಗಾರಿಗಳ ಬಿಲ್‌ಗಳನ್ನು ಈವರೆಗೂ ಕೂಡ ಸರ್ಕಾರ ಬಿಡುಗಡೆ ಮಾಡದೆ ಗುತ್ತಿಗೆದಾರರನ್ನ ಬೀದಿಪಾಲು ಮಾಡಲು ಹೊರಟಿದೆ. ಈ ಬಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ತಮಗೆ ಬೇಕಾದವರಿಗೆ ಈಗಾಗಲೇ 1200 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಯಾರು ಎಂಬುದನ್ನು ಬಹಿರಂಗ ಪಡಿಸುತ್ತೇನೆ ಎಂದು ಎಚ್ಚರಿಸಿದರು.
ಈಗಾಗಲೇ ಮಳೆಗಾಲ ಪ್ರಾರಂಭವಾಗಿ ಮುಂದಿನ ತಿಂಗಳು ಜಿಲ್ಲೆಯಲ್ಲಿ ಆಲೂಗೆಡ್ಡೆ ಬಿತ್ತನೆ ಪ್ರಾರಂಭವಾಗಬೇಕು. ಆದರೆ, ಈವರೆಗೂ ಕೂಡ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ನೀರಾವರಿ ಸಲಹಾ ಸಮಿತಿಯನ್ನು ಕರೆದಿಲ್ಲ. ಕೆಲವು ಪ್ರಕ್ರಿಯೆ ಮುಗಿದರೂ ಕಾಮಗಾರಿಯನ್ನು ಪ್ರಾರಂಭಿಸಲು ರಾಜಕೀಯ ದ್ವೇಷ ಮಾಡುತ್ತಿರುವುದು ಎಷ್ಟು ಸರಿ. ಇಂಥ ರಾಜಕೀಯ ದ್ವೇಷದ ಆಡಳಿತ ಹೆಚ್ಚುದಿನ ಉಳಿಯುವುದಿಲ್ಲ ಎಂದು ಕಿಡಿಕಾರಿದರು. ಕೂಡಲೇ ನೀರಾವರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಭೆ ಕರೆಯಬೇಕು.
ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಯುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬೇಕಾದವರಿಗೆ ಶೇ.8ರಷ್ಟು ಕಮಿಷನ್ ಪಡೆದು ಗುತ್ತಿಗೆ ನೀಡಲಾಗುತ್ತಿದೆ. ಮನೆಯ ಚಿನ್ನಾಭರಣ ಅಡವಿಟ್ಟು ಕಾಮಗಾರಿ ಮಾಡಿರುವ ಸಣ್ಣಪುಟ್ಟ ಗುತ್ತಿಗೆದಾರರ ಪರಿಸ್ಥಿತಿಯನ್ನು ಸರ್ಕಾರ ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರ ದಿವಾಳಿಯಾಗಿದೆ ಎಂದು ಘೋಷಿಸಲಿ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ 6 ದಿನಗಳಲ್ಲಿ ಶಿವಮೊಗ್ಗದ ವಿಮಾನನಿಲ್ದಾಣ ನಿರ್ಮಾಣ ಆಗಬೇಕು ಎಂದಿದ್ದರು. ಹಾಸನದ ಏರ್‌ಪೋರ್ಟ್ ದಶಕಗಳಿಂದ ನೆನೆಗುದಿಗೆ ಬಿದ್ದಿರುವುದು ತಿಳಿದಿಲ್ಲವೇ.
ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲದು ಕುಮಾರಸ್ವಾಮಿ ಹಾಸನದ ಬಜೆಟ್ ಮಾಡ್ತಾರೆ ಎನ್ನುತ್ತಿದ್ದವರು ಈಗ ಇವರು ಏನು ಮಾಡುತ್ತಿದ್ದಾರೆ. 12 ತಿಂಗಳಿಂದ ಹಾಸನ ಜಿಲ್ಲೆಯ ಸ್ಥಿತಿಗತಿ ಏನಾಗಿದೆ. ಕೂಡಲೇ ರಾಜಕೀಯ ಮರೆತು ನೀರಾವರಿ ಕಾಮಗಾರಿ ನಡೆಯುವಂತೆ ಮುಖ್ಯಮಂತ್ರಿ ನೋಡಿಕೊಳ್ಳಬೇಕು, ಗುತ್ತಿಗೆಯಲ್ಲಿ ರಾಜಕೀಯ ಮಾಡಬಾರದು ಎಂದರು.