ಹಾಸನ: ನೆರೆ ಪೀಡಿತ ಪ್ರದೇಶದ ಜನರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ವಹಿಸಿದೆ. ಪ್ರವಾಹ ಸಂತ್ರಸ್ತರಿಗಾಗಿ ಈಗಾಗಲೇ ಸಾವಿರ ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಹಾಸನದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡುತ್ತಾ, ಚಿಕ್ಕಮಗಳೂರಿನಲ್ಲಿ ಆಗಿರುವಷ್ಟು ಹಾನಿ ಹಾಸನದಲ್ಲಾಗಿಲ್ಲ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 7.5 ಕೋಟಿ ರೂ. ಹಣವಿದ್ದು, ತಾತ್ಕಾಲಿಕ ಪರಿಹಾರವಾಗಿ 10,000 ರೂ ಗಳನ್ನು ವಿತರಣೆ ಮಾಡಲಾಗಿದೆ. ಅತಿ ಹೆಚ್ಚು ಹಾನಿಗೊಳಗಾದ ಮನೆಗಳ ಮರು ನಿರ್ಮಾಣಕ್ಕೆ 1 ಲಕ್ಷ ರೂ. ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ರು.
'ಮನೆ ಕಳ್ಕೊಂಡ ಪ್ರತಿ ಕುಟುಂಬಕ್ಕೆ 25 ಸಾವಿರ ರೂ'
ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಬಾಡಿಗೆ ಮನೆಯಲ್ಲಿ ಇರಲು ಪ್ರತಿ ಕುಟುಂಬಕ್ಕೆ 25,000 ಸಾವಿರ ರೂಗಳನ್ನು ಮಾಲೀಕರಿಗೆ ನೀಡುವ ಬಗ್ಗೆ ಬೆಂಗಳೂರಿಗೆ ಹೋದ ಬಳಿಕ ಆದೇಶ ಹೊರಡಿಸುತ್ತೇನೆ. ಅಧಿಕಾರಿಗಳು ಕೂಡ ಯಾವುದೇ ರಜೆಯನ್ನು ಪಡೆಯದೆ, ಜನರೊಂದಿಗಿದ್ದು, ಅವರ ಸಂಕಷ್ಟ ಆಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
'ಜ್ಯೋತಿಷಿಗಳ ಮಾತಿನಿಂದ ಸರ್ಕಾರ ಪತನವಾಗಲ್ಲ'
ಕೋಡಿಮಠದ ಶ್ರೀಗಳ ಹೇಳಿರುವ ಸರ್ಕಾರದ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸುತ್ತಾ, ಜನರ ಆಶೀರ್ವಾದದ ಮೇಲೆ ಸರ್ಕಾರ ಅಧಿಕಾರದಲ್ಲಿ ಇರುತ್ತದೆ. ಯಾವುದೇ ಜ್ಯೋತಿಷಿಗಳ ಮಾತಿನಿಂದ ಸರ್ಕಾರ ಪತನಗೊಳ್ಳುವುದಿಲ್ಲ. ದೇಶದಲ್ಲಿ ಲಕ್ಷಾಂತರ ಜ್ಯೋತಿಷಿಗಳಿದ್ದಾರೆ.ಆ ಜ್ಯೋತಿಷಿಗಳಿಗೆ ತಲೆಕೆಡಿಸಿಕೊಳ್ಳದೆ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿರುವ ಜನರ ಮೇಲೆ ವಿಶ್ವಾಸವಿಟ್ಟಾಗ ಮಾತ್ರ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಹೇಳಿದ್ರು.
ಹಾಗಾಗಿ ನಮ್ಮ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಒಂದೊಂದು ಮಾಧ್ಯಮದಲ್ಲೂ ಕೂಡ ವಿಭಿನ್ನವಾಗಿ ಜ್ಯೋತಿಷಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಜ್ಯೋತಿಷಿಗಳ ರಾಹುಕಾಲ, ಗುಳಿಕಾಲ ಮತ್ತು ಅವರ ಮಾತಿನಿಂದ ಯಾವುದೇ ಸರ್ಕಾರ ಉರುಳಲಿಲ್ಲ. ಹಾಗಾಗಿ ಅವರ ಮಾತಿಗೆ ಹೆಚ್ಚು ಮಾನ್ಯತೆ ಬೇಡ. ನಮ್ಮ ಸರ್ಕಾರ ಜನಪರ ಕೆಲಸ ಮಾಡುತ್ತಿದ್ದು,ಸರ್ಕಾರದ ಅವಧಿ ಪೂರ್ಣಗೊಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.