ಹಾಸನ: ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿ, ಕರಿಮೆಣಸು ಹಾಗೂ ಭತ್ತದ ಫಸಲಿಗೆ ಹಾನಿಯಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ತಾಲೂಕಿನ ವಳಲಹಳ್ಳಿ, ಮರ್ಕಳ್ಳಿ, ಹಿರಿದನಹಳ್ಳಿ, ಮರ್ಜನಳ್ಳಿ ಸುತ್ತಮುತ್ತ 4-5 ದಿನಗಳಿಂದ ಮಳೆ ಸುರಿಯುತ್ತಿದ್ದು, ಬೆಳೆಗಳು ನೆಲಕಚ್ಚಿವೆ. ಇದುವರೆಗೂ ಸುಮಾರು 104 ಮಿ.ಮೀ. ಮಳೆಯಾಗಿದೆ. ಕಣದಲ್ಲಿ ಹಾಕಿದ್ದ ಕಾಫಿ ಮಳೆ ನೀರಿನೊಂದಿಗೆ ಚರಂಡಿ, ಹಳ್ಳಕೊಳ್ಳಕ್ಕೆ ಕೊಚ್ಚಿ ಹೊಗುತ್ತಿದ್ದು, ರೈತರ ಬದುಕು ಬರಡಾಗುತ್ತಿದೆ.
ಭಾಗಶಃ ಕಾಫಿ ಬೆಳೆ ನಾಶ:
ಈಗಾಗಲೇ ಶೇ. 50ರಷ್ಟು ಫಸಲು ನಾಶವಾಗಿದ್ದು, ಕಾಫಿ ಹಣ್ಣು ಗಿಡದಲ್ಲಿ ಇರುವಾಗಲೇ ಮಳೆ ಆಗಿರುವುದರಿಂದ ಮುಂದಿನ 8 ದಿನಗಳಲ್ಲಿ ಹೂವು ಅರಳುತ್ತದೆ. ಹೂವು ಒಣಗಿ ಉದುರುವವರೆಗೆ ಅಂದರೆ ಸುಮಾರು 15 ದಿನಗಳವರೆಗೆ ಕಾಫಿ ಕೊಯ್ಲು ಮಾಡುವಂತಿಲ್ಲ. ಮಳೆಯಿಂದ ಗಿಡದಲ್ಲಿ ಇರುವ ಹಣ್ಣು ಕಪ್ಪಾಗಿ ತೊಟ್ಟು ಕಳಚಿ ಬೀಳುತ್ತದೆ. ಹಣ್ಣು ಇರುವ ಕೊನೆಯಲ್ಲಿ ಹೂವು ಕಟ್ಟುವುದರಿಂದ ಹಣ್ಣು ಕೊಯ್ಲು ಮಾಡಲು ಹೋದರೆ ಹೂವು ಉದುರಿ ಮುಂದಿನ ಫಸಲು ಹಾಳಾಗುತ್ತದೆ. ಹಾಗಾಗಿ ಇಂತಹ ವೇಳೆ ಮಳೆಯಾದ್ರೆ ಕಾಫಿಗೆ ತುಂಬಾ ತೊಂದರೆಯಾಗುತ್ತದೆ.
ಓದಿ:ಹಾಸನದಲ್ಲಿ ಅಕಾಲಿಕ ಮಳೆ : ಕಾಫಿ ಬೆಳೆಗಾರರು ಕಂಗಾಲು
ಹೂವು ಕಟ್ಟಿರುವ ಗೊಂಚಲಿನಲ್ಲಿಯೇ ಹೊಸ ಚಿಗುರು ಸಹ ಹುಟ್ಟುವುದರಿಂದ ಗೊಂಚಲಿನಲ್ಲಿ ಕಾಯಿ ಕಟ್ಟುವ ಪ್ರಮಾಣ ಸಹ ಕಡಿಮೆ ಆಗುತ್ತದೆ. ಇದರಿಂದ ಮುಂದಿನ ಬೆಳೆ ಶೇ. 50ರಷ್ಟು ಕಡಿಮೆ ಆಗುತ್ತದೆ. ಅಕಾಲಿಕ ಮಳೆಯಿಂದಾಗಿ ವಾಡಿಕೆಗಿಂತ ಎರಡು ತಿಂಗಳ ಮೊದಲೇ ಕಾಫಿ ಹೂವಾಗುತ್ತದೆ. ಇದನ್ನು ಉಳಿಸಿಕೊಳ್ಳಲು 15 ದಿನಗಳಿಗೊಮ್ಮೆಯಂತೆ ಕನಿಷ್ಠ ನಾಲ್ಕು ಬಾರಿ ನೀರು ಹಾಯಿಸಬೇಕಾಗುತ್ತದೆ.