ಹಾಸನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆರ್. ಶ್ರೀನಿವಾಸ್ ಗೌಡ ಅವರು ಅಧಿಕಾರ ಸ್ವೀಕರಿಸಿದರು.
ಚನ್ನರಾಯಪಟ್ಟಣ ತಾಲೂಕು ಬಡಕನಹಳ್ಳಿ ಗ್ರಾಮದ ಶ್ರೀನಿವಾಸ್ ಗೌಡ, ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು. 2016 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಇವರು, ವಿಜಯಪುರ ಜಿಲ್ಲೆ ಇಂಡಿ ಠಾಣೆ ಹಾಗೂ ಮಂಗಳೂರಿನಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದ್ದಾರೆ.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಾಮ್ ನಿವಾಸ್ ಸೆಪಟ್ ಅವರನ್ನು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ವಿಭಾಗದ ಎಸ್‌ಪಿಯಾಗಿ ವರ್ಗ ಮಾಡಲಾಗಿದೆ. ಇನ್ನೂ ಈ ಬಗ್ಗೆ ಶ್ರೀನಿವಾಸ್ ಗೌಡ ಮಾತನಾಡಿ, ‘ಸರ್ಕಾರಿ ಸೇವಕನಾಗಿ ಏನು ಮಾಡ ಬೇಕೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಎಸ್‌ಪಿಯಾಗಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಜಿಲ್ಲೆಯ 17.50 ಲಕ್ಷ ಜನರಿಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು, ನಾಗರಿಕರು ಯಾವ ಸಮಯದಲ್ಲಾದರೂ ಕಚೇರಿಗೆ ಬಂದು ಸಮಸ್ಯೆ ಹೇಳಿಕೊಳ್ಳ ಬಹುದು’ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, ಹಾಸನ ಎಂದ ತಕ್ಷಣ ಆ ಜಿಲ್ಲೆಗೆ ಹೋಗುವುದು ಬೇಡ. ಕೆರಿಯರ್ ಹಾಳಾಗುತ್ತದೆ. ಅಲ್ಲಿನ ರಾಜಕೀಯ ಸರಿಯಿಲ್ಲ. ಒತ್ತಡಕ್ಕೆ ಒಳಗಾಗಬೇಕಾಗುತ್ತದೆ ಎಂಬಂತಹ ಮಾತುಗಳು ಸಹೋದ್ಯೋಗಿ ಹಾಗೂ ಹಿರಿಯರಿಂದ ಕೇಳಿ ಬಂದಿದೆ. ಆದರೆ, ಯಾವ ಜನಪ್ರತಿನಿಧಿಯೂ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರಿನ ಪಣಂಬೂರು ಠಾಣೆಯಲ್ಲಿ ಕೆಲಸ ಮಾಡುವಾಗ ಕಚೇರಿ ಸಿಬ್ಬಂದಿಗೆ ಕಾಫ್ ಆಫ್ ಮಂಥ್, ಆಶಾಕಿರಣ ಹೀಗೆ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸಿದ್ದೆ. ಮುಂದಿನ ದಿನಗಳಲ್ಲಿ ಹಾಸನದಲ್ಲೂ ಅದನ್ನು ಜಾರಿಗೊಳಿಸುವ ಆಲೋಚನೆಯಲ್ಲಿದ್ದೇನೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಜನರು ದೂರವಾಣಿ ಅಥವಾ ಖುದ್ದಾಗಿ ಸಂಪರ್ಕಿಸಬಹುದು ಎಂದರು.