ಹಾಸನ: ಸರ್ಕಾರವು ಆನ್‌ಲೈನ್ ಮೂಲಕ ನಡೆಸುತ್ತಿರುವ ಐಟಿಐ ಪರೀಕ್ಷೆಯನ್ನು ತಕ್ಷಣವೇ ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಜಾಶಕ್ತಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ಸಮಿತಿ ಕಾರ್ಯಕರ್ತರು, ಈ ಹಿಂದೆ ಐಟಿಐ ವಿದ್ಯಾರ್ಥಿಗಳ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೂ ತುಂಬ ಅನುಕೂಲವಾಗುತಿತ್ತು. ಕಳೆದ 2 ವರ್ಷಗಳಿಂದ ಸರ್ಕಾರ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡುತ್ತಿದೆ ಎಂದು ದೂರಿದರು.
ಅಲ್ಲದೇ ಹಳ್ಳಿಗಾಡಿನಿಂದ ಕೆಲವೊಂದು ವಿದ್ಯಾರ್ಥಿಗಳಿಗೆ ಆನ್‌ಲೈನ್ ಅಂದ್ರೆ ಏನು ಅಂತಾನೆ ಗೊತ್ತಿರುವುದಿಲ್ಲ. ಜೊತೆಗೆ ಪರೀಕ್ಷೆಗೆ ತಯಾರಾಗಲು ಅವರ ಬಳಿ ಬೇಕಾದ ವ್ಯವಸ್ಥೆಗಳಿರುವುದಿಲ್ಲ. ಆದ್ದರಿಂದ ಸರ್ಕಾರ ತಕ್ಷಣವೇ ಆನ್‌ಲೈನ್ ಪರೀಕ್ಷೆಯನ್ನು ರದ್ದುಗೊಳಿಸಿ, ಈ ಹಿಂದಿನಂತೆ ಲಿಖಿತ ಪರೀಕ್ಷೆಯನ್ನು ನಡೆಸಬೇಕೆಂದು ಆಗ್ರಹಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಕವಿತಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.