ಹಾಸನ: ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಸದಸ್ಯರು ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು.
ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್ಗೆ ಮನವಿ ಸಲ್ಲಿಸಿದ ಸಂಘದ ಸದಸ್ಯರು, 2 ವರ್ಷಗಳಿಂದ ನೌಕರರ 8 ತಿಂಗಳ ವೇತನ ಬಾಕಿಯಿದೆ. ಸಮಯಕ್ಕೆ ಸರಿಯಾಗಿ ವೇತನ ಸಿಗದೆ ಬಾದಾಮಿ ಹಾಗೂ ಚಿಂತಾಮಣಿ ತಾಲೂಕುಗಳಲ್ಲಿ ಗ್ರಾಮ ಪಂಚಾಯತ್ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿದರು.
ಕರ ವಸೂಲಿಗಾರ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆ ಕೋಟಾ ಶೇ. 70ರಿಂದ ಶೇ. 100ರಷ್ಟು ಹೆಚ್ಚಿಸಬೇಕು. ಲೆಕ್ಕ ಸಹಾಯಕ ಹುದ್ದೆಗಳ ಕೋಟಾ ಶೇ. 30ರಿಂದ ಶೇ. 50ರಷ್ಟು ಹೆಚ್ಚಿಸಬೇಕು. ಕಂಪ್ಯೂಟರ್ ಆಪರೇಟರ್ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿಗಳಿಗೆ ತಿದ್ದುಪಡಿ ಮಾಡಬೇಕು. ಎಲ್ಲಾ ಸಿಬ್ಬಂದಿಗೆ ನಿವೃತ್ತಿ ವೇತನ ಮಂಜೂರು ಮಾಡಬೇಕು. ಈಗ ಪ್ರಕಟಿಸಲಾಗಿರುವ ಗ್ರಾಪಂ ನೌಕರರ ಸೇವಾ ನಿಯಾಮವಳಿ ಕರಡು ಅಧಿಸೂಚನೆಗೆ ಬಂದಿರುವ ತಿದ್ದುಪಡಿಗಳನ್ನು ಪರಿಶೀಲಿಸಿ ಮತ್ತು ಸೇರಿಸಿ ತಕ್ಷಣ ಆಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.