ಹಾಸನ: ಲಾಕ್ಡೌನ್ ನಡುವೆಯೂ ರಸ್ತೆ ದುರಸ್ತಿಪಡಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದ್ದು, ದಿಗ್ಬಂಧನ ನಿಯಮ ಉಲ್ಲಂಲಘಿಸಿದ ಆರೋಪದಡಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೆಡಿಎಸ್ ಮುಖಂಡ ಅಗಿಲೆ ಯೋಗಿಶ್ ನೇತೃತ್ವದಲ್ಲಿ ನಗರದ ಹೊಸಲೈನ್ ರಸ್ತೆಯಲ್ಲಿ ಎರಡು ಜೋಡಿ ಎತ್ತುಗಳ ಮೂಲಕ ಅಣಕು ಬಿತ್ತನೆ ಮಾಡಿ ಪ್ರತಿಭಟಿಸಿದರು. ಲಾಕ್ಡೌನ್ನ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಹಾಗೂ ಅನುಮತಿ ಪಡೆಯದೇ ಮುಷ್ಕರ ನಡೆಸಿದ್ದರಿಂದ ಪ್ರತಿಭಟನಾಕಾರರು ಹಾಗೂ ಎತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ 8 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರೀತಮ್ ಜೆ. ಗೌಡ ಶಾಸಕರಾಗಿ ಎರಡು ವರ್ಷಗಳಾದರು ಅಭಿವೃದ್ಧಿ ಕೆಲಸಗಳ ಮಾಡಿಲ್ಲ. ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಇರುವವರಿಗೆ ಅವಕಾಶ ಕೊಡಬೇಕು. ಅಮೃತ ಯೋಜನೆಯ ರಸ್ತೆಗಳಿಗೆ ಗುಂಡಿ ಬಿದಿದ್ದು, ಕಳೆದ ಎರಡು ವರ್ಷಗಳಿಂದ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿದರು.
ಅಗಿಲೆ ಯೋಗಿಶ್ ಮಾತನಾಡಿ, ಅಮೃತ ಯೋಜನೆಗೆ ರಸ್ತೆ ಬಗೆದು ಎರಡು ವರ್ಷಗಳಾಗಿದ್ದರೂ ಶಾಸಕರು ಈ ಬಗ್ಗೆ ಗಮನ ನೀಡದೆ ಬೇಡದ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ರಾಜಕೀಯ ನಿರುದ್ಯೋಗಿಗಳು. ಹೊಸಲೈನ್ ರಸ್ತೆಯಲ್ಲಿ ಜೋಳ ಹಾಕಿ ಬಿತ್ತನೆ ಮಾಡಿದರೆ 20 ಕುಂಟೆ ಫಸಲು ಬರುತ್ತದೆ ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಂದ ಅನುದಾನವನ್ನು ನಾನು ತಂದಿರುವುದಾಗಿ ಹೇಳಿದ ಶಾಸಕರು ಒಂದು ದಿನದ ಹಿಂದೆಯಷ್ಟೇ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಯಾವಾಗ ರಸ್ತೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದ್ದೀರಾ? ಯಾವ ಸರ್ಕಾರದಲ್ಲಿ ಅನುಮೋದನೆ ಮಾಡಲಾಗಿದೆ ಎಂಬುದರ ಬಗ್ಗೆ ದಾಖಲೆಗಳನ್ನು ಸಾರ್ವಜನಿಕರ ಮುಂದಿಡಿ ಎಂದರು.