ಹಾಸನ : ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣವಾದ ಬೆನ್ನಲ್ಲೇ ಹೆಚ್ ಡಿ ದೇವೇಗೌಡರ ಪ್ರತಿಮೆ ನಿರ್ಮಾಣ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಪಕ್ಷಾತೀತವಾಗಿ ದೇವೇಗೌಡರ ಪುತ್ಥಳಿಯನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಬೇಕೆಂದು ರಾಜಕೀಯ ಪಕ್ಷಗಳು ಪಟ್ಟು ಹಿಡಿದಿವೆ.
ಹಾಸನದಲ್ಲಿ ಕಳೆದ ನಾಲ್ಕು ದಿನಗಳಿಂದ ಹೆಚ್ ಡಿ ದೇವೇಗೌಡರ ಪ್ರತಿಮೆ ನಿರ್ಮಾಣವಾಗಬೇಕು ಅಂತ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದೂ ಸಹ ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ಎನ್ ಆರ್ ವೃತ್ತದ ಮೂಲಕ ಮೆರವಣಿಗೆ ಸಾಗಿದ ಎಎಪಿ ಕಾರ್ಯಕರ್ತರು, ಹೆಚ್ಡಿಡಿ ಅಭಿಮಾನಿಗಳು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೆಲಕಾಲ ಪ್ರತಿಭಟನೆ ಮಾಡಿ ಬಳಿಕ ಡಿಸಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಹೇಗೋ ಹಾಗೆ ಒಕ್ಕಲಿಗರ ಹಿರಿಯ ದೊರೆ ದೇವೇಗೌಡರು. ಹಳ್ಳಿಮಗನಾಗಿ ದೆಹಲಿಯ ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ ಅಪ್ಪಟ ಕನ್ನಡಿಗ. ಇಂತಹ ಒಬ್ಬ ಮಹಾನ್ ನಾಯಕನ ಪ್ರತಿಮೆ ನಿರ್ಮಾಣ ಮಾಡಬೇಕು. ಮಾಜಿ ಪ್ರಧಾನಿಯ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಈ ಬಗ್ಗೆ ಪ್ರಸ್ತಾಪ ಮಾಡುವ ಮೂಲಕ ಪ್ರತಿಮೆಗೆ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ: ಮಾಜಿ-ಹಾಲಿ ಶಾಸಕರ ಫೈಟ್
ಮಹಿಳೆಯರಿಗೆ ಮೀಸಲಾತಿ ಸೇರಿ ಬೆಂಗಳೂರಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ದೇವೇಗೌಡರ ಪಾತ್ರ ಬಹು ದೊಡ್ಡದಿದ್ದು ಇದನ್ನ ಸರ್ಕಾರ ಪರಿಗಣಿಸಬೇಕು. ಬೆಂಗಳೂರಿನಲ್ಲಿರುವ ಕೆಂಪೇಗೌಡರ ಪ್ರತಿಮೆ ಪಕ್ಕದಲ್ಲಿಯೇ ದೇವೇಗೌಡರ ಪ್ರತಿಮೆ ನಿರ್ಮಾಣ ಮಾಡಬೇಕು. 108 ಅಡಿ ಪ್ರತಿಮೆಯನ್ನೇ ನಿರ್ಮಾಣ ಮಾಡಬೇಕು. ಜೊತೆಗೆ, ಹೆಚ್ಡಿಡಿ ತವರು ಜಿಲ್ಲೆ ಹಾಸನದ ಹೊರ ಹೊರವಲಯದ ಬುಸ್ತೇನಹಳ್ಳಿ ವೃತ್ತದಲ್ಲಿ ಸಹ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಬಗ್ಗೆ ಈಗ ಮಾತನಾಡುವುದಿಲ್ಲ: ಹೆಚ್ ಡಿ ದೇವೇಗೌಡ
ವ್ಯಕ್ತಿ ಬದುಕಿರುವಾಗ ಪ್ರತಿಮೆ ನಿರ್ಮಾಣ ಮಾಡಬಾರದು: ಈ ಹಿಂದೆ ಸಹ ದೇವೇಗೌಡರ ಪ್ರತಿಮೆ ನಿರ್ಮಾಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ವ್ಯಕ್ತಿ ಬದುಕಿರುವಂತಹ ಸಂದರ್ಭದಲ್ಲಿ ಅವರ ಪ್ರತಿಮೆಯನ್ನು ಯಾವುದೇ ಕಾರಣಕ್ಕೂ ನಿರ್ಮಾಣ ಮಾಡಬಾರದು. ಇದರಿಂದ ಅಹಿತಕರ ಘಟನೆ ನಡೆಯುವುದಲ್ಲದೇ ಕಾನೂನು ಸುವ್ಯವಸ್ಥೆ ಹಾಳಾಗಲಿದೆ.
ಹೀಗಾಗಿ, ಬದುಕಿರುವಂತಹ ವ್ಯಕ್ತಿಯ ಪ್ರತಿಮೆ ನಿರ್ಮಾಣ ಮಾಡಿ ಅನಾವರಣ ಮಾಡುವುದನ್ನು ನ್ಯಾಯಾಂಗ ಒಪ್ಪುವುದಿಲ್ಲ ಎಂಬ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ದೇವೇಗೌಡರ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಕೂಗು ಮುನ್ನೆಲೆಗೆ ಬಂದಿದ್ದು, ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.