ಹಾಸನ: ನಗರದ ಕುವೆಂಪುನಗರದ ಮಿನಿ ವಿಧಾನಸೌಧದ ಬಳಿ ಹದಗೆಟ್ಟಿರುವ ರಸ್ತೆಯ ಗುಂಡಿಗಳಿಗೆ ಬಾಳೆ ಗಿಡಗಳನ್ನು ನೆಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2 ತಿಂಗಳಿಂದ ಸತತ ಮಳೆ ಸುರಿದಿದ್ದರಿಂದ ರಸ್ತೆಗಳಲ್ಲಿ ಸಾಕಷ್ಟು ಗುಂಡಿ ಬಿದ್ದಿವೆ. ನಿತ್ಯ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದು, ಇನ್ನು 15 ದಿನಗಳಲ್ಲಿ ರಸ್ತೆಯನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ನಗರದ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಮಾಡಲು ಯೋಗ್ಯವಲ್ಲದ ರಸ್ತೆಗಳಿದ್ದು, ಅದನ್ನು ಸರಿಪಡಿಸುವಂತಹ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿಲ್ಲ. ನಮ್ಮ ಪ್ರತಿಭಟನೆಯ ಮೂಲಕವಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಜಯರಾಜ್ ನಾಯ್ಡು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಗೌಸ್ ಮೋಹಿದ್ದಿನ್, ಹರೀಶ್ ಗೌಡ, ದಿನೇಶ್ ಗೌಡ, ಇದ್ರಿಸ್, ವಾಸು ಮುಂತಾದವರು ಪಾಲ್ಗೊಂಡಿದ್ದರು.