ಹಾಸನ: ಹಾಸನಾಂಬೆ ದೇವಾಲಯಕ್ಕೆ ಹೋಗುವ ವಿಚಾರವಾಗಿ ಭಾನುವಾರದಂದು ಶಾಸಕ ಪ್ರೀತಂ ಗೌಡರ ಮೇಲೆ ಹರಿಹಾಯ್ದಿದ್ದ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರು ಸೋಮವಾರ ದೇವಾಲಯಕ್ಕೆ ಬಂದು ಹಾಸನದ ಶಾಸಕ ಪ್ರೀತಂ ಗೌಡರ ಹೆಗಲ ಮೇಲೆ ಕೈ ಹಾಕಿಕೊಂಡು ಜೊತೆಯಲ್ಲೇ ಅಮ್ಮನವರ ದರ್ಶನ ಪಡೆದರು.
ನಿನ್ನೆ ಹಾಸನದ ಶಾಸಕರ ಮೇಲೆ ಮುನಿಸಿಕೊಂಡು ಏಕವಚನದಲ್ಲೆ ಆಕ್ರೋಶ ವ್ಯಕ್ತಪಡಿಸಿ ವಾಪಸ್ ಹೋಗಿದ್ದ ನಾಗೇಂದ್ರ ಅವರು ಇಂದು ಶಾಸಕ ಪ್ರೀತಂ ಜೆ. ಗೌಡರ ಹೆಗಲ ಮೇಲೆ ಕೈ ಹಾಕಿಕೊಂಡು ಹಾಸನಾಂಬೆ ದೇವಾಲಯಕ್ಕೆ ತೆರಳುವ ಮೂಲಕ ರಾಜಕೀಯದಲ್ಲಿ ಹೇಗೆ ಬೇಕಾದರೂ ಬದಲಾಗುತ್ತಾರೆ ಎಂಬುದಕ್ಕೆ ಸಾಕ್ಷಿಯಾದರು.
ಅಮ್ಮನವರ ದರ್ಶನದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಾಗೇಂದ್ರ, ಕಾರ್ತಿಕ ಮಾಸದ ಅಮಾವಾಸ್ಯೆ ದಿನ ದೇವಿ ದರ್ಶನ ಚೆನ್ನಾಗಿ ಆಗಿದೆ. ಇದು ನಮ್ಮ ಸೌಭಾಗ್ಯ. ನನ್ನ ಆತ್ಮೀಯ ಸ್ನೇಹಿತ ಶಾಸಕ ಪ್ರೀತಂ ಗೌಡ ನನಗೆ ದರ್ಶನ ಮಾಡಿಸಿದ್ದಾರೆ. ತಾಯಿ ಚಾಮುಂಡೇಶ್ವರಿಯಂತೆ ಹಾಸನಾಂಬೆ ನೋಡಲು ಹೆಚ್ಚಿನ ಭಕ್ತರು ಬರುತ್ತಾರೆ ಎಂದು ಹೇಳಿದರು.
ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಇರುವುದರಿಂದ ಹೆಚ್ಚಿನ ಜನ ಬರುವುದುಂಟು. ಹಾಸನಾಂಬೆ ದರ್ಶನಕ್ಕೆ ನಾನು ನಿನ್ನೆ ತಡವಾಗಿ ಬಂದಿದ್ದೆ. ಸಮಯ ನನಗೆ ಗೊತ್ತಾಗಲಿಲ್ಲ. ಪ್ರೀತಂ ಗೌಡ ಅವರಿಗೂ ನಾನು ಫೋನ್ ಮಾಡಿರಲಿಲ್ಲ ಹಾಗಾಗಿ ಸಮಸ್ಯೆ ಆಯ್ತು. ನಾನು ಬಂದಾಗ ಐವತ್ತು ಜನ ಹೊರಗೆ ಇದ್ದರು, ಅವರನ್ನು ನನ್ನೊಟ್ಟಿಗೆ ಬಿಡಿ ಎಂದು ಕೇಳಿದೆ. ಅವರನ್ನು ಬಿಡದ ಕಾರಣ ನಾನು ಕೂಡ ವಾಪಸ್ ಹೋಗಿದ್ದೆ. ನಿನ್ನೆ ನಡೆದ ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಶಾಸಕ ನಾಗೇಂದ್ರ, ಈಗ ಬಂದು ದರ್ಶನ ಮಾಡಿದ್ದೇನೆ ಎಲ್ಲವೂ ಒಳ್ಳೆಯದಾಗಿದೆ. ಪ್ರೀತಂ ಗೌಡ ನನಗೆ ಸಹೋದರನ ಸಮಾನ, ನನಗೆ ತಮ್ಮ ಇದ್ದ ಹಾಗೆ. ಹಿಂದೆ ನಾನು ಅವರಿಗೆ ವಿಭಾಗ ಪ್ರಭಾರಿ ಆಗಿದ್ದೆ. ನಾನು ಬಂದಾಗಲೆಲ್ಲಾ ನನಗೆ ಊಟ ಕೊಡಿಸುತ್ತಿದ್ದ ಗೆಳೆಯ. ಹಾಗಾಗಿ ಆತ್ಮೀಯತೆ ಇದ್ದು, ಅಣ್ಣ ತಮ್ಮರಂತೆ ಹೆಚ್ಚು ಸಲುಗೆ ಇದೆ ಎಂದು ಹೇಳಿದರು.
ನಿನ್ನೆ ದರ್ಶನಕ್ಕೆ ಬಂದಾಗ ಹೆಚ್ಚುವರಿ ಎಎಸ್ಪಿ ತಡೆದ ಬಗ್ಗೆ ಗೃಹ ಕಛೇರಿಗೆ ಮಾಹಿತಿ ನೀಡಿದ್ದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನಿನ್ನೆ ಅಧಿಕಾರಿಗಳು ಒತ್ತಡದಲ್ಲಿ ಇದ್ದರು. ಅವರಿಗೆ ಶಾಸಕರು ಯಾರು ಎಂದು ಗೊತ್ತಾಗಿಲ್ಲ. ಸಮನ್ವಯದ ಕೊರತೆಯಿಂದ ಹೀಗಾಯ್ತು. ಅದನ್ನು ಅಲ್ಲಿಗೆ ಬಿಡೋಣ. ಅವರು ಕೂಡ ನಮ್ಮ ಸರ್ಕಾರದ ಓರ್ವ ಅಧಿಕಾರಿ ಎಂದು ಹೇಳಿದರು.
ಬಹಿರಂಗವಾಗಿ ಕ್ಷಮೆ ಕೇಳಿದ ಶಾಸಕ ಪ್ರೀತಂ ಗೌಡ : ಕಳೆದ ದಿನ ಶಾಸಕ ಎಲ್. ನಾಗೇಂದ್ರಗೆ ಹಾಸನಾಂಬೆ ದರ್ಶನಕ್ಕೆ ಅಡ್ಡಿ ಮಾಡಿದ ವಿಚಾರವಾಗಿ ಪ್ರೀತಂ ಜೆ. ಗೌಡ ಅವರು ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು. ನಿನ್ನೆ ಕೆಲಸದ ಒತ್ತಡದಿಂದ ಅಧಿಕಾರಿಗಳು ಈ ರೀತಿ ಮಾಡಿರಬಹುದು. ನಿನ್ನೆ ಸಮನ್ವಯದ ಕೊರತೆಯಿಂದ ಈ ಸಮಸ್ಯೆ ಆಗಿದೆ. ನನ್ನ ಹಿರಿಯರು, ಸಹೋದರ ಸಮಾನರಾದ ಅವರಿಗೆ ನಾನು ಎಲ್ಲರ ಮುಖೇನ ನಾನು ಕ್ಷಮೆ ಕೇಳುತ್ತೇನೆ. ಯಾರೂ ಕೂಡ ತಪ್ಪು ಮಾಡಬೇಕೆಂದು ಮಾಡಲ್ಲ. ಆಕಸ್ಮಿಕವಾಗಿ ಆಗಿದೆ ಇದನ್ನು ಇಲ್ಲಿಗೆ ಮುಗಿಸೋಣ ಎಂದರು.
ಇದನ್ನೂ ಓದಿ : ಪಿಜಿ-ಸಿಇಟಿ ಕೋಟಾ ಸೀಟು: ಶೇಕಡಾವಾರು ಪ್ರಮಾಣ ಕಡಿತಗೊಳಿಸಿದ್ದ ಸರ್ಕಾರದ ಅಧಿಸೂಚನೆ ರದ್ದು