ಹಾಸನ: ಸ್ವಪಕ್ಷೀಯ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಭಾನುವಾರ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಕೂಗಾಡಿದ್ದರು. ಸೋಮವಾರ ಜಿಲ್ಲಾಡಳಿತದ ಮೂಲಕ ದರ್ಶನಕ್ಕೆ ಬಂದು ಪ್ರೀತಂಗೌಡ ಹೆಗಲ ಮೇಲೆ ಕೈ ಹಾಕಿಕೊಂಡು ಹಾಸನಾಂಬೆ ದರ್ಶನ ಪಡೆದರು. ಈ ಮೂಲಕ ತಮ್ಮ ಮನಸ್ಸಿನಲ್ಲಿದ್ದ ಸಿಟ್ಟನ್ನು ಶಮನಗೊಳಿಸಿಕೊಂಡರು.
ಹಾಸನಾಂಬೆ ದೇವಾಲಯಕ್ಕೆ ಹೋಗುವ ವಿಚಾರವಾಗಿ ಭಾನುವಾರ ಪ್ರೀತಂ ಗೌಡ ವಿರುದ್ಧ ನಾಗೇಂದ್ರ ಹರಿಹಾಯ್ದಿದ್ದರು. ಸೋಮವಾರ ಹಾಸನಾಂಬೆ ಅಮ್ಮನವರ ದರ್ಶನ ಪಡೆದರು.
ಅಮ್ಮನವರ ದರ್ಶನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ನಾಗೇಂದ್ರ ಅವರು, ಕಾರ್ತಿಕ ಮಾಸದ ಅಮಾವಾಸ್ಯೆ ದಿನ ದೇವಿ ದರ್ಶನ ಚೆನ್ನಾಗಿ ಆಗಿದೆ. ಇದು ನಮ್ಮ ಸೌಭಾಗ್ಯ. ನನ್ನ ಆತ್ಮೀಯ ಸ್ನೇಹಿತ ಶಾಸಕ ಪ್ರೀತಂ ಗೌಡ ನನಗೆ ದರ್ಶನ ಮಾಡಿಸಿದ್ದಾರೆ. ತಾಯಿ ಚಾಮುಂಡೇಶ್ವರಿಯಂತೆ ಹಾಸನಾಂಬೆ ನೋಡಲು ಹೆಚ್ಚಿನ ಭಕ್ತರು ಬರುತ್ತಾರೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಇರೋದ್ರಿಂದ ಹೆಚ್ಚಿನ ಜನ ಬರುವುದುಂಟು.
ಹಾಸನಾಂಬೆ ದರ್ಶನಕ್ಕೆ ನಾನು ಭಾನುವಾರ ತಡವಾಗಿ ಬಂದಿದ್ದೆ. ಸಮಯ ನನಗೆ ಗೊತ್ತಾಗಲಿಲ್ಲ. ಪ್ರೀತಂ ಗೌಡ ಅವರಿಗೂ ನಾನು ಫೋನ್ ಮಾಡಿರಲಿಲ್ಲ. ಹಾಗಾಗಿ ಸಮಸ್ಯೆ ಆಯ್ತು. ನಾನು ಬಂದಾಗ ಐವತ್ತು ಜನ ಹೊರಗೆ ಇದ್ದರು, ಅವರನ್ನು ನನ್ನೊಟ್ಟಿಗೆ ಬಿಡಿ ಎಂದು ಕೇಳಿದೆ. ಅವರನ್ನು ಬಿಡದ ಕಾರಣ ನಾನು ಕೂಡ ವಾಪಸ್ ಹೋಗಿದ್ದೆ. ಆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಸೋಮವಾರ ತಾಯಿಯ ದರ್ಶನ ಮಾಡಿದ್ದೇನೆ, ಎಲ್ಲವೂ ಒಳ್ಳೆಯದಾಗಿದೆ ಎಂದರು.
ಇದನ್ನೂ ಓದಿ: ಸೂರ್ಯಗ್ರಹಣ: ಮಂಗಳವಾರದಂದು ಭಕ್ತರಿಗೆ ಹಾಸನಾಂಬೆ ದರ್ಶನ ಭಾಗ್ಯವಿಲ್ಲ
ದರ್ಶನಕ್ಕೆ ಬಂದಾಗ ಹೆಚ್ಚುವರಿ ಎಎಸ್ಪಿ ತಡೆದ ಬಗ್ಗೆ ಗೃಹ ಕಚೇರಿಗೆ ಮಾಹಿತಿ ನೀಡಿದ್ದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಭಾನುವಾರ ಅಧಿಕಾರಿಗಳು ಒತ್ತಡದಲ್ಲಿ ಇದ್ದರು. ಅವರಿಗೆ ಶಾಸಕರು ಯಾರು ಎಂದು ಗೊತ್ತಾಗಿಲ್ಲ. ಸಮನ್ವಯದ ಕೊರತೆಯಿಂದ ಹೀಗಾಯ್ತು. ಅದನ್ನು ಅಲ್ಲಿಗೆ ಬಿಡೋಣ, ಅವರು ಕೂಡ ನಮ್ಮ ಸರ್ಕಾರದ ಓರ್ವ ಅಧಿಕಾರಿ ಎಂದ ಹೇಳಿಕೆ ನೀಡುವುದರ ಮೂಲಕ ಶಾಸಕ ನಾಗೇಂದ್ರ ಮಾತಿಗೆ ವಿರಾಮ ಹೇಳಿದರು.
ಕ್ಷಮೆ ಕೇಳಿದ ಪ್ರೀತಂ ಗೌಡ: ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪ್ರೀತಂ ಗೌಡ, ಕೆಲಸದ ಒತ್ತಡದಿಂದ ಅಧಿಕಾರಿಗಳು ಈ ರೀತಿ ಮಾಡಿರಬಹುದು. ಯಾವುದೇ ಪಕ್ಷದ ಚುನಾಯಿತ ಪ್ರತಿನಿಧಿ ಬಂದರೂ, ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾಡಳಿತ ನೀಡಿದೆ. ಸಮನ್ವಯದ ಕೊರತೆಯಿಂದ ಸಮಸ್ಯೆ ಆಗಿದೆ. ನನ್ನ ಹಿರಿಯರು, ಸಹೋದರ ಸಮಾನರಾದ ಅವರಿಗೆ ನಾನು ಎಲ್ಲರ ಮುಖೇನ ಕ್ಷಮೆ ಕೇಳುತ್ತೇನೆ. ಯಾರೂ ಕೂಡ ತಪ್ಪು ಮಾಡಬೇಕೆಂದು ಮಾಡಲ್ಲ. ಆಕಸ್ಮಿಕವಾಗಿ ಆಗಿದೆ ಇದನ್ನು ಇಲ್ಲಿಗೆ ಮುಗಿಸೋಣ ಎಂದರು.