ಹಾಸನ : ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವನ ಉತ್ತರ ಪತ್ರಿಕೆ ತಿದ್ದಿ ಆತನ ಫಲಿತಾಂಶ್ ಅನುತೀರ್ಣ ಎಂದು ಪ್ರಕಟಿಸಿರುವ ಘಟನೆ ನಡೆದಿದೆ. ಈ ಕುರಿತು ಕಾಲೇಜು ಪ್ರಾಂಶುಪಾಲೆ ಸೇರಿ ಓರ್ವ ವಿದ್ಯಾರ್ಥಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಪ್ರಕರಣ?: ಬಿಜಾಪುರ ಮೂಲದ ಚೆನ್ನಯ್ಯ ಎಂಬ ವಿದ್ಯಾರ್ಥಿ ನರ್ಸಿಂಗ್ ವಿದ್ಯಾಭ್ಯಾಸ ಮಾಡಲೆಂದು ಹಾಸನದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪ್ರವೇಶಾತಿ ಪಡೆದಿದ್ದ. ಅಂತಿಮ ವರ್ಷದ ಪರೀಕ್ಷೆಯಲ್ಲಿ ಕೂಡ ಉತ್ತಮ ಅಂಕಗಳನ್ನು ಪಡೆಯುವ ನಿರೀಕ್ಷೆ ಹೊಂದಿದ್ದ. ಆದರೆ, ಅಂತಿಮ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವುದಾಗಿ ಫಲಿತಾಂಶ ಬಂದಿತ್ತು. ಇದನ್ನು ಕಂಡು ವಿದ್ಯಾರ್ಥಿ ಆತಂಕಕ್ಕೊಳಗಾಗಿದ್ದ.
ಇದರಿಂದ ಅನುಮಾನಗೊಂಡ ವಿದ್ಯಾರ್ಥಿ ವಿಶ್ವವಿದ್ಯಾಲಯದಿಂದ ಪೋಸ್ಟಲ್ ಮೂಲಕ ಉತ್ತರ ಪತ್ರಿಕೆ ತರಿಸಿಕೊಂಡಿದ್ದ. ಆದರೆ, ಉತ್ತರ ಪತ್ರಿಕೆಯ ಹಲವಾರು ಉತ್ತರಗಳನ್ನು ಮತ್ತೊಬ್ಬ ವಿದ್ಯಾರ್ಥಿಯಿಂದ ಅಳಿಸಿ ಹಾಕಿರುವುದು ಪತ್ತೆಯಾಗಿತ್ತು.
ಪ್ರತಿವರ್ಷ ಉತ್ತಮ ಅಂಕ ಪಡೆಯುತ್ತಿದ್ದ ವಿದ್ಯಾರ್ಥಿ ಹಾಗೂ ಪ್ರಾಂಶುಪಾಲರ ನಡುವೆ ಚಿಕ್ಕ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ಪ್ರಾಂಶುಪಾಲರು ಈ ಕೃತ್ಯ ಎಸಗಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.
ಈ ಬಗ್ಗೆ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜೀತಮುಕ್ತ ದಲಿತರು, ಅರಣ್ಯ ಸಿಬ್ಬಂದಿ ನಡುವೆ ತಾರಕಕ್ಕೇರಿದ ಜಮೀನು ವಿವಾದ