ಅರಕಲಗೂಡು: ಕಳೆದ ಮೂರು ದಿನಗಳಿಂದ ತಾಲೂಕಿನ ಹಲವೆಡೆ ಅಕಾಲಿಕ ಮಳೆಯಾಗುತ್ತಿದ್ದು, ರಾತ್ರಿ ಬಿದ್ದ ಮಳೆಗೆ ಭತ್ತ, ಕಾಫಿ, ರಾಗಿ ಸೇರಿದಂತೆ ಇನ್ನಿತರೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಸರ್ಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಘೋಷಣೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಭತ್ತ, ರಾಗಿ ಬೆಳೆ ಒಕ್ಕಣೆ ಮಾಡುವ ಸಮಯವಾಗಿರುವುದರಿಂದ ಹಲವಾರು ಬೆಳೆಗಳನ್ನು ರೈತರು ಕಟಾವು ಮಾಡಿ ಹೊಲ-ಗದ್ದೆಗಳಲ್ಲಿ ಬಿಟ್ಟಿದ್ದಾರೆ. ಇನ್ನು ಕೆಲವರು ಒಕ್ಕಣೆ ಮಾಡುತ್ತಿದ್ದಾರೆ. ಈ ವೇಳೆ ಮಳೆ ಸುರಿದ ಪರಿಣಾಮ ವರ್ಷವೆಲ್ಲ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೈಗೆ ಸಿಗದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಾಫಿ ಬೆಳೆಗಾರರು ಜಿಲ್ಲೆಯಲ್ಲಿ ಅರೇಬಿಕಾ ಕಾಫಿ ಹಣ್ಣನ್ನು ಕಟಾವು ಮಾಡಲು ಮುಂದಾಗಿದ್ದು, ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಣ್ಣು ಬಿಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಮಳೆಯ ಕಾರಣ ಬಿಡಿಸದೆ ಬಿಟ್ಟರೆ ಹಣ್ಣು ನೆಲಕ್ಕೆ ಬಿದ್ದು ಮಣ್ಣು ಪಾಲಾಗುತ್ತದೆ. ಮಳೆಯಲ್ಲೇ ಹಣ್ಣು ಬಿಡಿಸಿದರೆ ಒಣಗಿಸಲು ಆಗುತ್ತಿಲ್ಲ. ಇದರಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಮಳೆ ಮತ್ತು ಮಂಜಿನ ವಾತಾವರಣ ಇರುವುದರಿಂದ ಗಿಡದಲ್ಲಿ ಕಾಫಿ ಹಣ್ಣು ಇರುವಾಗಲೇ ಮತ್ತೆ ಹೂವು ಅರಳಿದೆ. ಜನವರಿ ತಿಂಗಳಲ್ಲೇ ಅಕಾಲಿಕ ಮಳೆಗೆ ಗಿಡದಲ್ಲಿ ಹೂ ಅರಳಿರುವುದರಿಂದ ಮತ್ತೆ ಒಣಗಿ ಹೋದಲ್ಲಿ ಒಂದು ವರ್ಷದ ವರೆಗೆ ಹೂ ಬಿಡುವುದಿಲ್ಲ. ಇದರಿಂದಾಗಿ ಮುಂದಿನ ವರ್ಷದ ಕಾಫಿ ಬೆಳೆಗೂ ತೀವ್ರ ತೊಂದರೆಯಾಗಲಿದೆ ಅನ್ನೋದು ರೈತರ ಅಳಲು. ಜೊತೆಗೆ ಇರುವ ಹಣ್ಣು ಬಿಡಿಸುವ ಸಂದರ್ಭ ಅಕಾಲಿಕ ಮಳೆಗೆ ಅರಳಿರುವ ಹೂವು ಕೂಡ ಉದುರಿ ಹೋಗುತ್ತದೆ ಇದರಿಂದಲೂ ಮುಂದಿನ ಬೆಳೆಗೂ ನಷ್ಟವಾಗುತ್ತದೆ.