ಹಾಸನ: ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ನಮ್ಮ ಬೆಂಬಲ ಇದೆ ಎಂದು ಹೇಳಿರುವ ಕುಮಾರಸ್ವಾಮಿ ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ, ಅದರಲ್ಲಿ ಎರಡು ಮಾತಿಲ್ಲ. ಆದರೆ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದು ಸ್ಥಳೀಯ ಶಾಸಕ ಪ್ರೀತಂ ಜೆ ಗೌಡ ಹೇಳಿದ್ದಾರೆ.
ಹಾಸನಾಂಬ ದೇವಿಯ ದರ್ಶನದ ಬಳಿಕ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಯಾರು ತೊಂದರೆ ಕೊಡಬೇಡಿ, ಕೆಲಸಮಾಡಲು ಸಮಯಾವಕಾಶ ಕೊಡಿ ಅಂತ ಹೇಳಿರುವ ಕುಮಾರಸ್ವಾಮಿ, ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಉತ್ತಮ ಎಂದು ಒಪ್ಪಿಕೊಂಡಿದ್ದಾರೆ. ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಪ್ರೀತಂ ಗೌಡ ಹೇಳಿದರು.
ಬಿಜೆಪಿ ಪಕ್ಷವನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ಆದರೆ ಕಾಂಗ್ರೆಸ್ ಮಾತ್ರ ಪಕ್ಷವನ್ನು 2023ರ ತನಕ ಟೀಕಿಸುತ್ತಲೇ ಇರಲಿ. ನಾವು ಅಭಿವೃದ್ಧಿ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಕಾಂಗ್ರೆಸ್ಸಿನವರಿಗೂ ಪ್ರೀತಂ ಟಾಂಗ್ ಕೊಟ್ರು.
ಇನ್ನು ಡಿಕೆಶಿ ಅವರೊಂದಿಗೆ ಪ್ರಮುಖ ನಾಯಕರುಗಳು ಸಭೆ ಸೇರಿ ಮಾತುಕತೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಕಾಂಗ್ರೆಸ್ ಪಕ್ಷದ ನಾಯಕರು. ಅವರು ಕಾಂಗ್ರೆಸ್ ನಾಯಕರ ಜೊತೆ ಮಾತನಾಡುವುದು ಅವರ ವೈಯಕ್ತಿಕ ವಿಚಾರ. ಆದರೆ ನಮ್ಮ ಸರ್ಕಾರವಂತೂ ಇನ್ನೂ ನಾಲ್ಕು ವರ್ಷ ಅಧಿಕಾರದಲ್ಲಿ ಇರುತ್ತೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟರು.
ಹಾಸನಾಂಬ ದರ್ಶನಕ್ಕೆ ಇಂದು ತೆರೆಬಿದ್ದಿದೆ. 13 ದಿನಗಳ ಕಾಲ ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆ ನಾಡಿನ ಜನತೆಗೆ ಒಳಿತನ್ನು ಮಾಡಲಿ. ಸಂಪ್ರದಾಯದಂತೆ ಸಮಯಕ್ಕೆ ದೇವಸ್ಥಾನದ ಬಾಗಿಲು ಮುಚ್ಚಬೇಕು. ಹಾಗಾಗಿ ಇಂದು ಅಪರಾಹ್ನ 1:16ಕ್ಕೆ ಬಾಗಿಲು ಹಾಕಲಾಗಿದೆ. ದರ್ಶನ ವಂಚಿತರಾದವರಿಗೆ ನಿರಾಸೆ ಬೇಡ. ಮುಂದಿನ ಬಾರಿ ದರ್ಶನ ಮಾಡಲಿ ಎಂದು ಶಾಸಕ ಭಕ್ತ ಸಮೂಹಕ್ಕೆ ಮನವಿ ಮಾಡಿದರು.