ಹಾಸನ: ಯಾವನ್ರೀ ಅವನು.. ಎಂದು ಶಾಸಕ ಪ್ರೀತಂ ಗೌಡ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಲ್ಲದೇ ಜೆಡಿಎಸ್ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಿದ್ರೂ ಹಾಸನದ ಶಾಸಕರನ್ನು ಸೋಲಿಸುವುದು ಶತಸಿದ್ಧ ಎಂದು ಪ್ರಜ್ವಲ್ ರೇವಣ್ಣ ಗರಂ ಆಗಿ ಉತ್ತರಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಾಸನದ ಗಣಪತಿ ಪೆಂಡಾಲ್ನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಎಲ್ಲಾ ವರ್ಗದ ಜನರಿಗೆ, ರೈತರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಆ ದೃಷ್ಟಿಯಲ್ಲಿ ಇವತ್ತು ಪೂಜೆ ಮಾಡಿದ್ದೇವೆ ಅಷ್ಟೇ. ಇದರಲ್ಲಿ ಯಾವ ವಿಶೇಷತೆಯೂ ಇಲ್ಲ. ಪ್ರತಿ ವರ್ಷ ಬಂದು ಪೂಜೆ ಮಾಡ್ತೀವಿ. ಕಳೆದ ಎರಡು ವರ್ಷ ಕೋವಿಡ್ ಇರುವ ಕಾರಣ ಬಂದಿರಲಿಲ್ಲ ಎಂದರು.
ಇದನ್ನೂ ಓದಿ: ನಾನು ಯಾರನ್ನೂ ರಕ್ಷಣೆ ಮಾಡಿಲ್ಲ, ನಾನೇ ಸೂಕ್ತ ತನಿಖೆಗೆ ಆಗ್ರಹಿಸಿದ್ದೇನೆ : ಪ್ರಜ್ವಲ್ ರೇವಣ್ಣ
ಹಾಸನ ಟಿಕೆಟ್ ಫೈಟ್ ಬಗ್ಗೆ ಕೇಳುತ್ತಿದ್ದಂತೆ ಕೆರಳಿದ ಪ್ರಜ್ವಲ್ ರೇವಣ್ಣ, ಮಧ್ಯಮಗಳ ಚಿಂತನೆಗೆಲ್ಲ ನಾನು ಉತ್ತರ ಕೊಡಲು ಆಗಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಟಿಕೆಟ್ ವಿಚಾರದಲ್ಲೂ ಯಾವುದೇ ಗೊಂದಲವಿಲ್ಲ. ನಮ್ಮ ಕುಟುಂಬದ ವತಿಯಿಂದ ಇಂದು ಪೂಜಾ ಕಾರ್ಯಕ್ರಮ ಆಯೋಜಿಸಿ ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಅವರೇ ಬರಬೇಕು, ಇವರೇ ಬರಬೇಕು ಅನ್ನೋದೇನೂ ಇಲ್ಲ. ಒಂದು ಕುಟುಂಬದಿಂದ ಆಯೋಜಿಸಿರುವ ಪೂಜಾ ಕಾರ್ಯಕ್ರಮ ಇದು. ಭಿನ್ನಮತ ಎಲ್ಲಿ ಬಂತು? ಭಿನ್ನಮತ ಪ್ರಶ್ನೆಯೇ ಇಲ್ಲ ಎಂದು ನೇರವಾಗಿ ಉತ್ತರಿಸಿದರು.
ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಅವರ ಅಭಿಮಾನಿಗಳು ಒತ್ತಾಯ ಮಾಡಿದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಈ ಬಗ್ಗೆ ಸಭೆಯಲ್ಲಿ ಯಾರು ನಮಗೆ ಪ್ರಸ್ತಾವನೆ ಇಟ್ಟಿಲ್ಲ. ಭವಾನಿ ರೇವಣ್ಣನವರ ಅಭಿಮಾನಿ ವರ್ಗವಿದ್ದು, ಅವರು ಈ ಬಾರಿ ಸ್ಪರ್ಧಿಸಬೇಕೆಂದು ಮನವಿ ಕೊಟ್ಟಿದ್ದಾರೆ ಅಂತಾ ಕೇಳ್ಪಟ್ಟಿದ್ದೇನೆ. ನಮ್ಮಲ್ಲಿ ಹಲವಾರು ಜನ ಅಭ್ಯರ್ಥಿಗಳು ಇದ್ದಾರೆ. ಪಕ್ಷದ ಅಧ್ಯಕ್ಷರಿಗೆ ಎಲ್ಲರೂ ಮನವಿ ಸಲ್ಲಿಸುವ ಕೆಲಸ ಮಾಡ್ತಾರೆ. ಎಲ್ಲವನ್ನು ಪರಿಗಣಿಸಿ ಪಕ್ಷದ ಹಿರಿಯರು, ಇಲ್ಲಿಯ ಸ್ಥಳೀಯ ಮುಖಂಡರ ಜೊತೆ ಫ್ಲಸ್, ಮೈನಸ್ ಬಗ್ಗೆ ಚರ್ಚಿಸುತ್ತೇವೆ. ದೇವೇಗೌಡರು, ರೇವಣ್ಣ ಮತ್ತು ಕುಮಾರಣ್ಣ ಅವರು ಸೇರಿ ಒಳ್ಳೆಯ ಅಭ್ಯರ್ಥಿಯನ್ನು ಘೋಷಣೆ ಮಾಡುವ ಕೆಲಸ ಮಾಡುತ್ತಾರೆ. ಯಾರಿಗೆ ಟಿಕೆಟ್ ನೀಡಿದ್ರೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಇದನ್ನೂ ಓದಿ: ದೇವೇಗೌಡರ ಕಾಲಿನ ಧೂಳಿನ ಸಮ ಇಲ್ಲ ರಾಜಣ್ಣ: ಸಂಸದ ಪ್ರಜ್ವಲ್ ರೇವಣ್ಣ
ಸಾಮಾನ್ಯ ಕಾರ್ಯಕರ್ತನಿಗೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಎಂದಿರುವ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ಈಗ ನಾನು ಸಂಸದನಾಗುವ ಮುಂಚೆ 13 ವರ್ಷ ಸಾಮಾನ್ಯ ಕಾರ್ಯಕರ್ತನಾಗಿ, ಪಕ್ಷದ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಯಾರೇ ಬರಬಹುದು, ಯಾರೇ ಹೋಗಬಹುದು. ಎಲ್ಲರೂ ಕೂಡ ಒಂದು ಪಕ್ಷದ ಸದಸ್ಯರಾದ ಮೇಲೆ ಸಾಮಾನ್ಯ ಕಾರ್ಯಕರ್ತನೆ. 13 ವರ್ಷ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ ಮೇಲೆಯೇ ಸಂಸದ ಸ್ಥಾನ ಕೊಟ್ಟಿರೋದು. ಎಲ್ಲರೂ ಅವರವರ ಪರಿಶ್ರಮ ತೋರಿಸಲೇಬೇಕು. ಯಾರು ಟಿಕೆಟ್ ಕೇಳಬಾರದು ಅಂತ ಇಲ್ಲ, ಯಾರು ಬೇಕಾದರೂ ಟಿಕೆಟ್ಗೆ ಅರ್ಜಿ ಹಾಕಬಹುದು. ಎಲ್ಲರನ್ನು ಪರಿಗಣಿಸುತ್ತೇವೆ ಎಂದು ಕುಟುಕಿದ ಅವರು, ಮುಂದಿನ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಹೆಚ್.ಡಿ. ಕುಮಾರಸ್ವಾಮಿ ವಹಿಸುತ್ತಿದ್ದಾರೆ ಎಂದರು.
ಸಂಸದರು, ಎಂಎಲ್ಸಿ ಶಕ್ತಿ ಅಷ್ಟು ಕುಂದಿದೆಯಾ ಎಂಬ ಶಾಸಕ ಪ್ರೀತಂಗೌಡ ಹೇಳಿಕೆಗೆ ಉತ್ತರಿಸಿದ ಅವರು, ಪ್ರೀತಂ ಗೌಡ ವಿರುದ್ಧ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅವನು ಯಾವನು ಅಂತ ನಾನು ಉತ್ತರ ಕೊಡಲಿ?, ಅವರನ್ನ ಬಿಟ್ಟಾಕಿ, ನಾನು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಅವನು ದಿನ ಬೆಳಗ್ಗೆ ಮಾತನಾಡುತ್ತಾನೆ, ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಾಗುವುದಿಲ್ಲ. ಈ ಬಾರಿ ಸೋಲಿಸುತ್ತೇನೆ ನೋಡ್ತಿರಿ ಎಂದ್ರು.
ಇದನ್ನೂ ಓದಿ: ಸರ್ವೇ ರಿಪೋರ್ಟ್ ಬಳಿಕ ನನ್ನ ತಾಯಿಯ ಚುನಾವಣೆ ಸ್ಪರ್ಧೆ ನಿರ್ಧಾರ: ಪ್ರಜ್ವಲ್ ರೇವಣ್ಣ
ಶಾಸಕ ಪ್ರೀತಂ ಗೌಡ ಭ್ರಮೆಯಲ್ಲಿದ್ದಾರೆ, ಅವರಿಗೆ ಜನರು ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ. ಇಂತಹವರು ಬಹಳಷ್ಟು ಜನ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಕುಮಾರಣ್ಣನೇ ಸವಾಲು ಸ್ವೀಕಾರ ಮಾಡಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಹೈಕಮಾಂಡ್ ಬಂದು ಸವಾಲು ಸ್ವೀಕಾರ ಮಾಡಿದೆ ಎಂದರೆ ನಾವು ಸವಾಲು ಸ್ವೀಕಾರ ಮಾಡಿದ್ದೇವೆ ಎಂದರ್ಥ. ನೂರಕ್ಕೆ ನೂರು ಭಾಗ ಹಾಸನದ ಶಾಸಕರನ್ನ ಸೋಲಿಸೋದು ಶತಸಿದ್ಧ. ಇದನ್ನು ನಾನು ಹೇಳ್ತಿಲ್ಲ, ಇಡೀ ಹಾಸನ ಜಿಲ್ಲೆಯ ಜನರೇ ಸೋಲಿಸಬೇಕೆಂದು ಹೇಳುತ್ತಿದ್ದಾರೆ ಅಂತಾ ಟಾಂಗ್ ನೀಡಿದರು.
ಮಾಜಿ ಶಾಸಕ ದಿವಂಗತ ಎಚ್.ಎಸ್. ಪ್ರಕಾಶ್ ಅವರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಗೈರು ವಿಚಾರವಾಗಿ ಮಾತನಾಡಿ, ನನಗೆ ಕಾರ್ಯಕ್ರಮ ಎರಡು ದಿನ ಇರುವ ಮುಂಚೆ ಆಹ್ವಾನ ಪತ್ರ ಕೊಟ್ರು. ಒಂದು ತಿಂಗಳ ಹಿಂದೆಯೇ ನನಗೆ ಜಪಾನ್ ಡಿಲಿಗೇಷನ್ಗೆ ಅಲೋಕೇಷನ್ ಆಗಿತ್ತು. ಹಾಗಾಗಿ, ನಾನು ಅವರಿಗೆ ತಿಳಿಸಿಯೇ ಹೋಗಿದ್ದೆ. ಭವಾನಿ ರೇವಣ್ಣ ಅವರಿಗೆ ಆಹ್ವಾನ ನೀಡದಿರುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.