ಹಾಸನ: ನಾಟಿ ಕೋಳಿ ಮರಿ ಅಂತ ಹೇಳಿ ಫಾರಂ ಕೋಳಿ ಮರಿಗಳನ್ನ ಕೊಟ್ಟು ತಾವು ಮೋಸ ಹೋಗಿರುವುದು ಅಲ್ಲದೇ ರೈತನಿಗೂ ವಂಚನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಾಟಿ ಕೋಳಿಗೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲೂ ಹೆಚ್ಚಿನ ಬೇಡಿಕೆಯಿದ್ದು, ಸದ್ಯ ಲಾಭದಾಯಕ ಉದ್ಯಮವಾಗಿದೆ. ಹೀಗಾಗಿ ಕೋವಿಡ್-19 ಲಾಕ್ಡೌನ್ ವೇಳೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಧರಣೇಶ್ ಎಂಬ ರೈತ ಸರ್ಕಾರದ ವತಿಯಿಂದ ನೀಡುವ ಅನುದಾನದಡಿ ಕೋಳಿಮರಿ ಸಾಕಣೆಗೆ ಮುಂದಾಗಿದ್ರು. ಅದಕ್ಕಾಗಿ ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯದ ಅಡಿ ಬರುವ ಜಾನುವಾರು ಉತ್ಪಾದನೆ ಮತ್ತು ನಿರ್ವಹಣೆಯ ಇಲಾಖೆಯನ್ನು ಸಂಪರ್ಕಿಸಿದ್ರು. ಇಲಾಖೆ ಮಾರ್ಗದರ್ಶನದಲ್ಲಿಯೇ ಸುಮಾರು 35 ಸಾವಿರ ರೂ. ವೆಚ್ಚದಲ್ಲಿ ಕೋಳಿಮರಿ ಖರೀದಿಸಿ, ಜೊತೆಗೆ ಲಕ್ಷಾಂತರ ರೂ ಖರ್ಚುಮಾಡಿ ಸಾಕಣೆ ಕೇಂದ್ರವನ್ನು ನಿರ್ಮಿಸಿದ್ರು.
ಕೊಟ್ಟಿದ್ದು ನಾಟಿ ಕೋಳಿ ಮರಿ - ಆಗಿದ್ದು ಫಾರಂ ಕೋಳಿ:
ರೈತ ಧರಣೇಶ್ ನಾಟಿ ಕೋಳಿ ಮರಿ ಸಾಕಣೆ ಮಾಡಲು ಪ್ರಾರಂಭ ಮಾಡಿದರು. 'ಕೋಗಿಲೆಯ ಗೂಡಲ್ಲಿ ಕಾಗೆ ಬೆಳೆದ ಹಾಗೆ, ನಾಟಿ ಕೋಳಿ ಅಂತ ತಂದು ಸಾಕಿದ ಮರಿಗಳು ಬೆಳೆಯುತ್ತಾ ಫಾರಂ ಕೋಳಿಗಳಾಗಿ ಮಾರ್ಪಾಡಾಗಿದ್ದು, ಹಾಕಿದ ಬಂಡವಾಳವೆಲ್ಲ ನಷ್ಟವಾಯಿತು ಅನ್ನು ಚಿಂತೆಯಲ್ಲಿ ಧರಣೇಶ್ ಇದ್ದಾರೆ.
ಇಲಾಖೆಯಿಂದಲೇ ಮೋಸ,ನ್ಯಾಯ ಒದಗಿಸುವಂತೆ ಮನವಿ:
ನಾಟಿ ಕೋಳಿ ಮರಿ ಅಂತ ಹೇಳಿ ನನಗೆ ಫಾರಂ ಕೋಳಿ ಮರಿಯನ್ನು ಕೊಟ್ಟು ವಂಚನೆ ಮಾಡಿದ್ದನ್ನು ಪ್ರಶ್ನೆ ಮಾಡಲು ಮುಂದಾದ ನನಗೆ ಡಾ. ರುದ್ರಪ್ಪ ಧಮ್ಕಿ ಹಾಕಿದ್ದು, ಇದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಅಂತ ಹಾರಿಕೆ ಉತ್ತರ ನೀಡುತ್ತಿದ್ದಾರೆ. ತನಗೆ ಆಗಿರುವ ಅನ್ಯಾಯ ಸರಿಪಡಿಸಿ ಕೊಡಿ ಅಂತ ಈಗ ರೈತ ಮಾಧ್ಯಮದ ಮುಂದೆ ಅಲವತ್ತುಕೊಂಡಿದ್ದಾರೆ.
''ನಾವೂ ಮೋಸ ಹೋಗಿದ್ದೇವೆ: ನಮಗೂ ಗೊತ್ತಾಗಲಿಲ್ಲ'': ಡಾ. ರುದ್ರಪ್ಪ
ಕುಣಿಗಲ್ ಮೂಲದ ತಿಲಕ್ ಎಂಬಾತನಿಂದ ಹಾಸನದ ಪಶುವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಜಾನುವಾರು ಉತ್ಪಾದನಾ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ. ಎಸ್. ರುದ್ರಪ್ಪ ಸುಮಾರು ಒಂದು ಸಾವಿರ ಕೋಳಿಮರಿಗಳನ್ನ ಖರೀದಿಸಿದ್ರು. ನಿರ್ವಹಣೆ ನಂತರ ಆ ಮರಿಗಳನ್ನು ಚನ್ನರಾಯಪಟ್ಟಣದ ಧರಣೇಶ್ ಎಂಬುವವರಿಗೆ ಸರ್ಕಾರದ ಸಬ್ಸಿಡಿ ಮೂಲಕ ಕೋಳಿ ಮರಿಗಳನ್ನು ನೀಡಿದ್ದರು. ಕೋಳಿಮರಿಗಳು ಬೆಳೆಯುತ್ತಾ ನಾಟಿ ಕೋಳಿಗಳಾಗದೇ ಫಾರಂ ಕೋಳಿ ಆಗಿ ಬದಲಾವಣೆಯಾಗಿದ್ದು, ಈ ವಿಚಾರವನ್ನು ಸರ್ಕಾರಕ್ಕೆ ಬೇರೆ ಮೊಟ್ಟೆ ನೀಡಿ ಯಾಮಾರಿಸಿದ ವ್ಯಾಪಾರಿ ತಿಲಕ್ಗೆ ತಿಳಿಸಿದ್ದು, ಈಗ ತಿಲಕ್ ಸಂಪರ್ಕಕ್ಕೆ ಸಿಗದೇ ತಲೆಮರೆಸಿಕೊಂಡಿದ್ದಾನಂತೆ. ಇನ್ನು ಮೋಸ ಹೋಗಿರುವ ರೈತ ಧರಣೇಶ್ಗೆ ಆಗಿರುವ ಅನ್ಯಾಯವನ್ನ ಇಲಾಖೆ ಮುಖಾಂತರವೇ ಸರಿಪಡಿಸಿಕೊಡುವುದಾಗಿ ಡಾ. ರುದ್ರಪ್ಪ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ.