ಅರಸೀಕೆರೆ (ಹಾಸನ) : ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ. ಸರಿಯಾದ ಸಮಯಕ್ಕೆ ಮಳೆಯಾದ ಕಾರಣ ರೈತರು ಬಿತ್ತನೆ ಮಾಡಿದ್ರು. ಆದ್ರೀಗ ಮಳೆ ಜಾಸ್ತಿಯಾದ ಕಾರಣ ಆಲೂಗಡ್ಡೆ ಮೊಳಕೆಯೊಡೆಯುವ ಲಕ್ಷಣವೇ ಕಾಣುತ್ತಿಲ್ಲ. ಹೀಗಾಗಿ ರೈತರು ಚಿಂತೆಗೀಡಾಗಿದ್ದು, ಸಾಲದ ಸುಳಿಗೆ ಸಿಲುಕುವ ಭಯದಲ್ಲಿದ್ದಾರೆ.
ಮಳೆ ಸರಿಯಾದ ಸಮಯದಲ್ಲಿ ಆಗಮಿಸಿದರೂ ಮೊಳಕೆಯೊಡೆಯುವ ಸಂದರ್ಭದಲ್ಲಿಯೇ ಹದಮಳೆಯಿಂದ ಬೀಜ ಭೂಮಿಯಲ್ಲಿಯೇ ಕರಗುವ ಸಾಧ್ಯತೆ ಹೆಚ್ಚಿರುವುದರಿಂದ ರೈತನಿಗೆ ಆತಂಕ ಎದುರಾಗಿದೆ.
ಅರಸೀಕೆರೆ ತಾಲೂಕಿನ ಗಂಡಸಿ ಮತ್ತು ಚಿಟ್ಟನಹಳ್ಳಿ ಭಾಗದಲ್ಲಿ ಈ ಬಾರಿ ಸಾಕಷ್ಟು ರೈತರು ಆಲೂಗಡ್ಡೆ ಬಿತ್ತನೆ ಮಾಡಿದ್ದಾರೆ. ಆದರೆ, ಆಲೂಗಡ್ಡೆ ಬಿತ್ತನೆಗೆ ಭೂಮಿ ಹದ ಮಾಡಿಕೊಂಡ ಬಳಿಕ ವರುಣ ಕೂಡ ಆಗಮಿಸಿದ. ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾಗಿದ್ದರಿಂದ ಬಿತ್ತನೆ ಮಾಡಿದ ಆಲೂಗಡ್ಡೆ ಬೀಜಕ್ಕೆ ತೇವಾಂಶ ಹೆಚ್ಚಾಗಿದ್ದರಿಂದ ಮೊಳಕೆಯೊಡೆಯದೆ ಇರುವುದು ರೈತನನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ನಾವು 2 ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದು. ಕಳೆದ ವಾರದಿಂದ ಸುರಿದ ಮಳೆಗೆ ಆಲೂಗಡ್ಡೆ ಮೊಳಕೆ ಬಾರದೆ ಕೊಳೆತು ಹೋಗಿದೆ. ಸಾಲ ಪಡೆದು ಬಿತ್ತಿನೆ ಮಾಡಿದ್ರಿಂದ ಈ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಆಲೂಗಡ್ಡೆಗೆ ಪರಿಹಾರ ಧನ ನಿಗದಿ ಮಾಡಿಲ್ಲ. ಈ ಬಾರಿ ಆಲೂಬೆಳೆ ಕೈ ಕೊಟ್ಟರೆ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಚಿಟ್ಟನಹಳ್ಳಿ ಗ್ರಾಮದ ರೈತ ದೊಡ್ಡೇಗೌಡ ಹೇಳುತ್ತಾರೆ.