ಹಾಸನ: ಬುರ್ಕಾ ಧರಿಸಿ ಬಸ್ಸಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದ ಮೂವರು ಆರೋಪಿಗಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಗರದ ದಾಸರಕೊಪ್ಪಲು ಬಳಿ ನಡೆದಿದೆ.
ಖತರ್ನಾಕ್ ಕಳ್ಳಿಯರು ಬುರ್ಕಾ ಧರಿಸಿ ನಗರ ಸಾರಿಗೆ ಬಸ್ ಹತ್ತಿದ್ದಾರೆ. ಬಸ್ನಲ್ಲಿ ಪ್ರಯಾಣಿಕರಂತೆ ನಟಿಸಿ ಸಮಯ ನೋಡಿ ಮಹಿಳೆಯ ಪರ್ಸ್ ಹಾಗೂ ಚೈನ್ ಕ್ಷಣಾರ್ಧದಲ್ಲಿ ಎಗರಿಸಿದ್ದಾರೆ. ಕಳ್ಳತನ ಮಾಡುತ್ತಿದ್ದನ್ನು ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದ ಮಹಿಳೆವೋರ್ವಳು ಇವರನ್ನು ಗಮನಿಸಿ ಕಳ್ಳಿ, ಕಳ್ಳಿ ಎಂದು ಕೂಗಿಕೊಂಡಿದ್ದಾಳೆ. ಕೂಗಾಟ ಕೇಳಿದ ಚಾಲಕ ತಕ್ಷಣ ಬಸ್ ನಿಲ್ಲಿಸಿದ್ದಾರೆ.
ಬಳಿಕ ಚಾಲಾಕಿಗಳು ಹಾಕಿಕೊಂಡಿದ್ದ ಬುರ್ಕಾವನ್ನು ಬಿಸಾಡಿ ಅಲ್ಲಿಂದ ಪರಾರಿಯಾಗಲು ಮುಂದಾಗಿದ್ದಾರೆ. ಈ ವೇಳೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಹಿಂಬಾಲಿಸಿ ಹಿಡಿದು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.