ಸಕಲೇಶಪುರ: ತಾಲ್ಲೂಕಿನಲ್ಲಿ ಪ್ರತೀ ವರ್ಷ ಭಾರೀ ಮಳೆಯಾಗುತ್ತಿದ್ದು, ಜನರು ಮನೆ ಕಳೆದುಕೊಂಡು ತೊಂದರೆಗೊಳಗಾಗುತ್ತಿದ್ದಾರೆ. ಹೀಗಾಗಿ ನೆರೆ ಸಂತ್ರಸ್ತರಿಗಾಗಿ ಶಾಶ್ವತ ಪರಿಹಾರ ಕೇಂದ್ರವೊಂದನ್ನು ನಿರ್ಮಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ತಾಲೂಕಿನ ಕೌಡಹಳ್ಳಿ, ಬ್ಯಾಕರವಳ್ಳಿ ಸೇರಿದಂತೆ ವಿವಿಧೆಡೆ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡಿದ ನಂತರ ಪ್ರವಾಹ ಸಂದರ್ಭದಲ್ಲಿ ನೊಂದವರಿಗೆ ಶೀಘ್ರ ಪರಿಹಾರ ನೀಡಬೇಕೆಂದು ಸೂಚಿಸಿದ್ದೇನೆ. ಕಳೆದ ವರ್ಷದ ಪರಿಹಾರ ವಂಚಿತರು ಪರಿಹಾರವನ್ನು ಕೂಡಲೇ ಪಡೆಯಲು ಮುಂದಾಗಬೇಕು. ಈಗಾಗಲೇ ಸುಮಾರು 340 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರ ಪ್ರಧಾನಿ ಮೋದಿಯವರ ಜೊತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ನಾನು, ಬಸವರಾಜ ಬೊಮ್ಮಾಯಿ ಮಾತನಾಡಲಿದ್ದೇವೆ. ರಾಜ್ಯಕ್ಕೆ ಹೆಚ್ಚಿನ ಹಣ ನೀಡುವಂತೆ ಮನವಿ ಮಾಡಲಿದ್ದೇವೆ ಎಂದರು.
ಶಾಶ್ವತ ಪರಿಹಾರ ಕೇಂದ್ರ ತಾಲೂಕಿಗೆ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಪುರುಷರು, ಮಹಿಳೆಯರಿಗೆ ಪ್ರತ್ಯೇಕ ವಾಸಕ್ಕೆ ಕೊಠಡಿಗಳು, ಪ್ರತ್ಯೇಕ ಶೌಚಾಲಯ, ಲೈಬ್ರರಿ ಸೇರಿದಂತೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಅನುಮೋದನೆಯನ್ನು ಶೀಘ್ರ ನೀಡುತ್ತೇನೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಪರಿಹಾರ ಕೇಂದ್ರ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು. ತಾಲೂಕಿನಲ್ಲಿ ಹೆಚ್.ಆರ್.ಪಿ .ಭೂ ಹಗರಣ ಕುರಿತು ತನಿಖೆ ನಡೆಸಲಾಗುತ್ತಿದ್ದು, ತನಿಖೆ ಮುಗಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ಮಳೆಯಿಂದ ಹಾನಿಗೀಡಾದ ಕೃಷಿ ಪರಿಷತ್ತಿನ ಸಹಕಾರ ಸಂಘದ ಕಟ್ಟಡವನ್ನು ಕಂದಾಯ ಸಚಿವ ಆರ್. ಅಶೋಕ್ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಗಿರೀಶ್, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ತಾ.ಪಂ. ಅಧ್ಯಕ್ಷೆ ಶ್ವೇತಾ ಪ್ರಸನ್ನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಹಿತ್ ಜಂಬರ್ಡಿ ಸೇರಿದಂತೆ ಇತರರು ಇದ್ದರು.