ಹಾಸನ: ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ (88) ಭಾನುವಾರ ಇಹಲೋಕ ತ್ಯಜಿಸಿದರು. ಆದರೆ ಅವರು ನೆನಪು ಮಾತ್ರ ಎಲ್ಲರ ಮನದಲ್ಲಿ ಹಾಗೇ ಉಳಿದಿದೆ.
ಉಡುಪಿಯಿಂದ ಬೆಂಗಳೂರು-ಮೈಸೂರು, ತಿರುಪತಿಗೆ ಹೋಗವಾಗಲೆಲ್ಲಾ ಹಾಸನದಲ್ಲಿ ರಾತ್ರಿ ವಿಶ್ರಾಂತಿ ಪಡೆದು ನಂತರ ಮುಂದಿನ ಪ್ರಯಾಣ ಬೆಳೆಸುತ್ತಿದ್ದರು. ಡಿ.16 ರಿಂದ ಪ್ರಾರಂಭವಾಗಿದ್ದ ಧನುರ್ಮಾಸದ ಹಿನ್ನಲೆಯಲ್ಲಿ ತಿರುಪತಿಗೆ ಭೇಟಿ ನೀಡಿದ್ದ ಶ್ರೀಗಳು ವಾಪಸ್ ಉಡುಪಿಗೆ ಹೋಗುವ ಸಂದರ್ಭದಲ್ಲಿ ಡಿ.19ರಂದು ಹಾಸನದ ಶ್ರೀ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ಒಂದು ದಿನ ಉಳಿದು ರಾಮದೇವರ ಮತ್ತು ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಅಚ್ಚರಿ ಮೂಡಿಸಿತ್ತು ಕೊನೆ ಮಾತು:
ವಿಶ್ರಾಂತಿ ಪಡೆದು ಧನುರ್ಮಾಸ ಪೂಜೆ ಮುಗಿಸಿ ಉಡುಪಿ ಕಡೆ ಹೊರಡುವ ವೇಳೆ ಮಠದ ಪುರೋಹಿತರು ಮತ್ತೆ ಯಾವಾಗ ಭೇಟಿ ನೀಡುತ್ತೀರಿ ಯತಿಗಳೇ ಎಂದು ಕೇಳಿದಾಗ, "ನಾನು ಇನ್ನು ಬರ್ತೀನೋ ಇಲ್ಲವೋ ಗೊತ್ತಿಲ್ಲ" ಎಂದು ಹೇಳಿ ಹೊರಟಿದ್ದರಂತೆ. ಹಾಗೆ ಹೇಳಿ ವಾರಗಳು ಕಳೆಯುಷ್ಟವರಲ್ಲಿ ಯತಿಗಳು ನಮ್ಮೊಂದಿಗಿಲ್ಲ ಎಂಬುದಕ್ಕೆ ನೋವುಂಟಾಗುತ್ತದೆ ಎಂದು ರಾಘವೇಂದ್ರ ಮಠದ ಪುರೋಹಿತರು ಕಂಬನಿ ಮಿಡಿದರು.
ಶ್ರೀಗಳ ಬೋಧನೆ, ನಡೆ-ನುಡಿಯನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಪರಸ್ಪರ ಪ್ರೀತಿ, ವಿಶ್ವಾಸ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಸಮಾನವಾಗಿ ಕಾಣಬೇಕೆಂಬ ಅವರ ಜೀವತ ಕಾಲದಲ್ಲಿ ಅಪೇಕ್ಷೆಪಟ್ಟಿದ್ದರು. ಅದನ್ನು ನಾವುಗಳು ಮುಂದುವರೆಸಿಕೊಂಡು ಹೋಗಬೇಕಿದೆ. ಆ ಕಾರ್ಯವನ್ನ ಹಾಸನದ ಮಠ ಮುಂದುವರೆಸಿಕೊಂಡು ಹೋಗಲಿ ಎಂದು ನಾನು ಅಪೇಕ್ಷೆ ಪಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.