ಹಾಸನ: ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಕುಡಿಯುವ ನೀರಿಗೆ 15ನೇ ಹಣಕಾಸಿನಲ್ಲಿ ಕುಡಿಯುವ ನೀರಿನ ಮೀಟರ್ ಖರೀದಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಆರ್. ನಾರಾಯಣ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿಗೆ ಮೀಟರ್ ಅಳವಡಿಸಲು ಮುಂದಾಗಿದ್ದು, ಈ ಅನುದಾನ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ 15 ನೇ ಹಣಕಾಸಿನಲ್ಲಿ ರಾಜ್ಯಾದ್ಯಂತ ಮೀಟರ್ ಅಳವಡಿಸಲು ಖರೀದಿಗೆ ಮುಂದಾಗಿದ್ದಾರೆ. ಇದರಲ್ಲಿ ಮೇಲ್ನೋಟಕ್ಕೆ ದೊಡ್ಡ ಭ್ರಷ್ಟಾಚಾರ ಮತ್ತು ಅಕ್ರಮ ನಡೆಯುವ ಸಾಧ್ಯತೆ ಇದೆ ಹಾಗೂ ಸರ್ಕಾರದ ಅನುದಾನವನ್ನು ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರದವತಿಯಿಂದ ಮೇಕ್ ಇನ್ ಇಂಡಿಯಾ ಐ.ಎಸ್.ಐ ಗುರುತು ಹೊಂದಿರುವ ಉತ್ತಮ ಗುಣಮಟ್ಟದ ಕಂಪನಿಯ ಮೀಟರ್ ಖರೀದಿಸಲು ಪಾರದರ್ಶಕವಾಗಿ ಟೆಂಡರ್ ಮುಖಾಂತರ ಖರೀದಿಸಲು ಎಲ್ಲಾ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಸಲಹೆ ನೀಡಬೇಕು ಎಂದು ಮನವಿ ಮಾಡಿದರು.
ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದ್ದು, ಪಾರದರ್ಶಕವಾಗಿ ಸರ್ಕಾರದ ಹಣ ಸದುಪಯೋಗವಾಗಬೇಕು. ಟೆಂಡರ್ ಕೊಡುವಾಗಲು ಎಲ್ಲಾರನ್ನು ಸಮನಾಗಿ ನೋಡಬೇಕು ಎಂದರು.