ಅರಕಲಗೂಡು (ಹಾಸನ): ತಾಲೂಕಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತದ ಕಾರ್ಮಿಕರನ್ನು ತಾಲೂಕು ಆಡಳಿತದಿಂದ ಸೋಮವಾರ ತವರಿಗೆ ಕಳುಹಿಸಿಕೊಡಲಾಯಿತು.
ತಹಶೀಲ್ದಾರ್ ಪಾರ್ಥಸಾರಥಿ ಮಾತನಾಡಿ, ತಾಲೂಕಿನಲ್ಲಿ ಉತ್ತರ ಭಾರತದ ಹಲವಾರು ಕಾರ್ಮಿಕರು ಕೂಲಿ ಕೆಲಸ ಮಾಡುತ್ತಿದ್ದು, ಕೆಲವರು ಕೊರೊನಾ ಲಾಕ್‍ಡೌನ್ ಸಂಕಷ್ಟದಿಂದಾಗಿ ಊರಿಗೆ ಮರಳಲು ತೊಂದರೆಯಾಗಿತ್ತು. ಇದೀಗ ಸರ್ಕಾರದ ಆದೇಶದನ್ವಯ ಸೇವಾಸಿಂಧು ಯೋಜನೆಯಡಿ ಹೆಸರು ನೋಂದಾಯಿಸಿ ಕೊಂಡಿರುವ ಉತ್ತರ ಪ್ರದೇಶದ 7 ಮತ್ತು ಜಾರ್ಖಂಡ್ ರಾಜ್ಯದ 11 ಕಾರ್ಮಿಕರನ್ನು ತವರಿಗೆ ಕಳುಹಿಸಲಾಗುತ್ತಿದೆ.
ಇವರಿಗೆ ಊಟ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಕಾರ್ಮಿಕರು ಕಳುಹಿಸುವ ಮೊದಲು ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು.