ಹಾಸನ: 6ನೇ ವೇತನ ಆಯೋಗ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಇಳಿದಿರುವ ಸಾರಿಗೆ ನೌಕರರ ವೇತನ ಕಡಿತ ಮಾಡುವುದಾಗಿ ಪ್ರಾದೇಶಿಕ ಕಾರ್ಯಾಗಾರ ( ಕಿಪ್ಕೋ) ನೋಟಿಸ್ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳನ್ನು ನಿರ್ಮಾಣ ಮಾಡುವ ಕಾರ್ಯಾಗಾರ ರಾಜ್ಯದಲ್ಲಿ ಕೇವಲ ಬೆಂಗಳೂರು ಮತ್ತು ಹಾಸನದಲ್ಲಿದೆ. ಹಾಸನ ಪ್ರಾದೇಶಿಕ ಕಾರ್ಯಗಾರದ ಕಿಪ್ಕೋ ನೌಕರರನ್ನು ಕೆ.ಎಸ್.ಆರ್.ಟಿ.ಸಿ. ನೌಕರರೊಂದಿಗೆ ವಿಲೀನಗೊಳಿಸಲಾಗಿದೆ. ಕಿಪ್ಕೋ ನೌಕರರು ಕೇವಲು 3 ಮಂದಿ ನಿವೃತ್ತಿಯಂಚಿನಲ್ಲಿದ್ದಾರೆ. ಹೀಗಾಗಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳೇ ಇಲ್ಲಿ ಬಹುತೇಕ ಕೆಲಸ ಮಾಡುತ್ತಿದ್ದು, ಅವರು ನಿನ್ನೆ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಗೆ ಬೆಂಬಲ ನೀಡಿದ್ದರಿಂದ ಪ್ರಾದೇಶಿಕ ಕಾರ್ಯಾಗಾರಕ್ಕೂ ಆರ್ಥಿಕ ನಷ್ಟ ಉಂಟಾಗಿದೆ.
ನಿನ್ನೆ ಹಾಸನದಲ್ಲಿ ಒಂದೇ ಒಂದು ಬಸ್ ಕೂಡ ರಸ್ತೆಗಿಳಿದಿರಲಿಲ್ಲ. ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಘಟಕದ ವ್ಯವಸ್ಥಾಪಕರು ನೌಕರರನ್ನು ಮನವೊಲಿಸಲು ಮುಂದಾದ್ರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ನೌಕರರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರಿಂದ ಕೆಎಸ್ಆರ್ಟಿಸಿ ಹಾಸನ ವಿಭಾಗಕ್ಕೆ ಸುಮಾರು 60 ಲಕ್ಷಕ್ಕೂ ಅಧಿಕ ರೂ. ನಷ್ಟ ಉಂಟಾಗಿದೆ. ಇದರ ಜೊತೆಗೆ ಬಸ್ ತಯಾರಿಕಾ ಘಟಕಕ್ಕೂ ಕೂಡ ನಷ್ಟ ಸಂಭವಿಸಿದೆ. ಹೀಗಾಗಿ ನಮ್ಮ ನೌಕರರಿಗೆ "ನೋ ವರ್ಕ್ ನೋ ಪೇ" ಅಡಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪ್ರಾದೇಶಿಕ ಕಾರ್ಯಗಾರದ ವ್ಯವಸ್ಥಾಪಕ ಲಕ್ಷ್ಮಣ್ ತಿಳಿಸಿದ್ದಾರೆ.