ಹಾಸನ: ಕರ್ನಾಟಕ ಬಂದ್ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲ ಸಂಘಟನೆಗಳ ಮುಖಂಡರುಗಳು ಮಾತ್ರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಆಟೋ ಚಾಲಕರ ಸಂಘದ ಕೆಲವು ಸದಸ್ಯರು ಸಾಂಕೇತಿಕವಾಗಿ ಕೆಲಕಾಲ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ವೇಳೆ ಕೆಲವರು ಬೈಕ್ ರ್ಯಾಲಿ ನಡೆಸಲು ಮುಂದಾದಾಗ ಪೊಲೀಸರು ಅವಕಾಶ ನಿರಾಕರಿಸಿದರು. ಹೀಗಾಗಿ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಹರೀಶ್ ಗೌಡ ಮಾತನಾಡಿ, ಸರೋಜಿನಿ ಮಹಿಷಿ ವರದಿ ಜಾರಿಗೆ ತಂದರೆ ಕರ್ನಾಟಕದಲ್ಲಿ ಉದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ. ಹತ್ತನೇ ತರಗತಿ ಓದಿದವರಿಗೂ ಕೆಲಸ ನೀಡಬೇಕು, ಆಗ ಮಾತ್ರ ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ಪ್ರಾಪ್ತಿಯಾಗುತ್ತದೆ. ಆದರೆ ಇದನ್ನು ಮಾಡದೆ ಪ್ರತಿಭಟನೆಯನ್ನು ಹತ್ತಿಕ್ಕಲು ಹೊರಟಿರುವ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.