ಹಾಸನ: ಮುಂಬೈನಿಂದ ಬಂದ ಜನರನ್ನು ನಗರದ ಇನ್ಸ್ ಆಸ್ಪತ್ರೆಯಲ್ಲಿ ನಿಗಾದಲ್ಲಿಡಲಾಗಿದ್ದು, ಜಿಲ್ಲಾಡಳಿತ ಸರಿಯಾದ ಸೌಲಭ್ಯದ ಜೊತೆ ಚಿಕಿತ್ಸೆ ನೀಡುತ್ತಿಲ್ಲ ಎಂದು ಕ್ವಾರಂಟೈನಲ್ಲಿರುವವರು ಆರೋಪಿಸಿದ್ದಾರೆ.
ನಮಗೂ ಮತ್ತು ಮುಂಬೈನಿಂದ ಬಂದಂತಹ ವ್ಯಕ್ತಿಗಳಿಗೂ ಸಂಬಂಧವೇ ಇಲ್ಲ. ಕೆಲವರು ಬೇಕಂತಲೇ ನಮ್ಮ ಹೆಸರನ್ನು ಆಶಾ ಕಾರ್ಯಕರ್ತೆಯರಿಗೆ ನೀಡಿದ್ದಾರೆ. ನಮಗೆ ಯಾವುದೇ ಕಾಯಿಲೆಗಳಿಲ್ಲ. ದಯಮಾಡಿ ನಮ್ಮನ್ನು ಬಿಟ್ಟುಬಿಡಿ ಎಂದು ಕೆಲವರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಮುಂಬೈನಿಂದ ಬಂದ ಕೆಲ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾದ ಕೆಲವರನ್ನು ಮೂರ್ನಾಲ್ಕು ಕೊಠಡಿಗಳಲ್ಲಿ ಇರಿಸಲಾಗಿದ್ದು, ಸರಿಯಾದ ಸಮಯಕ್ಕೆ ಆಹಾರ ನೀಡುತ್ತಿಲ್ಲ ಎಂಬುದು ಒಂದು ಕಡೆಯಾದ್ರೆ, ಮತ್ತೊಂದೆಡೆ ಸ್ಯಾನಿಟೈಸರ್, ಮಾಸ್ಕ್ ಮತ್ತು ಸಾಬೂನುಗಳನ್ನು ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕ್ವಾರಂಟೈನ್ ಮಾಡಲಿ ಬೇಡ ಎನ್ನುವುದಿಲ್ಲ. ನಾವು ತಂದ ಲಗೇಜು ಕೂಡ ಮುಟ್ಟಲು ಹೆದರಿಕೊಳ್ಳುವ ಇಂಥವರು ನಮಗೆ ನಿಜವಾಗಿಯೂ ಚಿಕಿತ್ಸೆ ನೀಡುತ್ತಾರಾ ಎಂಬುದು ನಮ್ಮ ಪ್ರಶ್ನೆ ಎಂದು ಕೆಲವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೆಲ ಸ್ಥಳೀಯರು ನಮ್ಮ ಮೇಲಿನ ದ್ವೇಷದಿಂದ ನಮ್ಮ ಹೆಸರನ್ನು ಬರೆಸಿ ಇಲ್ಲಿ ಕೂಡಿ ಹಾಕುವಂತೆ ಮಾಡಿದ್ದಾರೆ ಎಂದು ವಯೋವೃದ್ಧರು ತಮ್ಮ ಅಳನನ್ನ ತೋಡಿಕೊಳ್ಳುತ್ತಿದ್ದು, ನಿಜಕ್ಕೂ ಜಿಲ್ಲೆಯಲ್ಲಿ ಹುಟ್ಟಿಕೊಳ್ಳುತ್ತಿರುವ ಕೊರೊನಾ ಸೋಂಕಿತರ ಬಗ್ಗೆ ಅನುಮಾನ ಹುಟ್ಟಿಸುವಂತೆ ಮಾಡಿದೆ.