ಹಾಸನ: ಕೊರೊನಾ ಸಾಮಗ್ರಿ ಖರೀದಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಮಾಸ್ಕ್, ವೆಂಟಿಲೇಟರ್‌ಗಳನ್ನು ಆ ದಿನದ ಬೆಲೆಗೆ ಖರೀದಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಸಾಮಗ್ರಿ ಖರೀದಿಯಲ್ಲಿ ಹಗರಣ ನಡೆದಿದ್ದು, ನಾಳೆ ದಾಖಲೆ ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಎರಡು ಸಾವಿರ ಕೋಟಿಯೂ ಇಲ್ಲ, ಮೂರು ಸಾವಿರ ಕೋಟಿಯನ್ನೂ ಸರ್ಕಾರ ಖರ್ಚು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದರು.
ಎಲ್ಲರೂ ಧೈರ್ಯವಾಗಿರಿ ಯಾರೂ ಧೃತಿಗೆಡಬೇಡಿ ಎಂದು ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದರು. ಯಾವ ಸಚಿವರಲ್ಲೂ ಗೊಂದಲವಿಲ್ಲ, ಎಲ್ಲಾ ಸಚಿವರೂ ಒಟ್ಟಾಗಿದ್ದೇವೆ. ಕೋವಿಡ್ ಟೆಸ್ಟ್ ಅನ್ನು ಉಚಿತವಾಗಿ ಮಾಡುವಂತೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಕೊರೊನಾ ಟೆಸ್ಟ್‌ಗೆ ಯಾವುದೇ ಶುಲ್ಕವಿಲ್ಲ. ಕೋವಿಡ್ ಕೇಂದ್ರದಲ್ಲಿರುವವರಿಗೆ ಪೌಷ್ಟಿಕಾಂಶ ಆಹಾರ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ವರದಿ:
ಇದಕ್ಕೂ ಮುನ್ನ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಸಚಿವರಿಗೆ ಕೊರೊನಾ ಕುರಿತು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಇದುವರೆಗೆ 611 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರು 1,127 ಜನರಿದ್ದಾರೆ. ಅಲ್ಲದೆ ಬಹಳಷ್ಟು ಸರ್ಕಾರಿ ನೌಕರರು ಕೂಡಾ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದರು.
ಕಳೆದ ಐದು ದಿನಗಳಲ್ಲಿ 6 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದೆ. ಟ್ರಾವೆಲ್ ಕಾಂಟ್ಯಾಕ್ಟ್ ಇರುವವರಿಂದಲೇ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದೆ. ಮೃತರ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕಿತರು ಆಸ್ಪತ್ರೆಗೆ ತಡವಾಗಿ ಬರುತ್ತಿರುವುದರಿಂದಲೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನೂರು ಸೋಂಕಿತರಿಗೆ ಶೇ. 4ರಷ್ಟು ಜನರು ಸಾವಿಗೀಡಾಗುತ್ತಿದ್ದಾರೆ. ಸದ್ಯ ತಜ್ಞ ವೈದ್ಯರು ನಿತ್ಯ ಎಲ್ಲಾ ರೀತಿಯ ಪರಿಶೀಲನೆ ನಡೆಸುತ್ತಿದ್ದಾರೆ. ಸೋಂಕು ಮತ್ತೆ ಹೆಚ್ಚಾದರೆ ಮತ್ತಷ್ಟು ವ್ಯವಸ್ಥೆ ಆಗಬೇಕಿದೆ ಎಂದು ಸೂಚ್ಯವಾಗಿ ಬೇಡಿಕೆ ಮಂಡಿಸಿದರು.