ಹಾಸನ: ನಾಳೆಯ ಫಲಿತಾಂಶದ ಬಗ್ಗೆ ನನಗೆ ಯಾವುದೇ ಆತಂಕವಾಗಲಿ,ಭಯವಾಗಲಿ ಇಲ್ಲ. ಮಂಡ್ಯದ ಜನತೆ ನನ್ನನ್ನು ಬೆಂಬಲಿಸುವುದು ನಿಶ್ಚಿತ. ನಾನು ಸೋಲುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಶೃಂಗೇರಿ ಶಾರದಾಂಬೆ ದರ್ಶನಕ್ಕೆ ತೆರಳಿ ಪೂಜೆ ಸಲ್ಲಿಸಿ ಗುರುಗಳ ಆಶೀರ್ವಾದ ಪಡೆದ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಹೊಳೆನರಸೀಪುರದ ಹೆಲಿಪ್ಯಾಡ್ಗೆ ಆಗಮಿಸಿದರು. ದೇವೇಗೌಡರ ಮಾರ್ಗದರ್ಶನದಂತೆ ಮನೆ ದೇವರಾದ ಬೆಟ್ಟದ ರಂಗನಾಥಸ್ವಾಮಿ ದೇವಾಲಯ ಮತ್ತು ಹುಟ್ಟೂರಾದ ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಾಳೆಯ ಫಲಿತಾಂಶದ ಬಗ್ಗೆ ನನಗೆ ಯಾವುದೇ ಆತಂಕವಾಗಲಿ, ಭಯವಾಗಲಿ ಇಲ್ಲ. ಮಂಡ್ಯದ ಜನತೆ ನನ್ನನ್ನು ಬೆಂಬಲಿಸುವುದು ನಿಶ್ಚಿತ. ನಾನು ಸೋಲುವ ಪ್ರಶ್ನೆಯೇ ಇಲ್ಲ. ನನ್ನ ಪರವಾಗಿ ಆರು ಮತ್ತು ನನ್ನ ಎದುರಾಳಿ ಪರವಾಗಿ ನಾಲ್ಕು ಸಮೀಕ್ಷೆಗಳ ವರದಿ ಬಂದಿವೆ. ನಾನು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ನಿಖಿಲ್ ಗೆಲ್ಲುವುದು ನೂರಕ್ಕೆ ನೂರು ಖಚಿತ. ಮಂಡ್ಯ ಅಲ್ಲದೇ ಹಾಸನ, ತುಮಕೂರಿನಲ್ಲೂ ನಾವು ಗೆಲ್ಲುತ್ತೇವೆ. ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಬೀಳುವುದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುತ್ತಾರೆ. ಯಡಿಯೂರಪ್ಪ ಸರ್ಕಾರ ಬೀಳಿಸುವುದಾಗಿ ಹಗಲುಗನಸು ಕಾಣುತ್ತಿದ್ದಾರೆ. ಅವರ ಪ್ರಯತ್ನ ವ್ಯರ್ಥವಾಗಲಿದೆ. ಮಾಧ್ಯಮದವರು ಇಷ್ಟ ಬಂದಹಾಗೆ ವರದಿ ಮಾಡಿದ್ದಾರೆ ಎಂದು ಕಿಡಿ ಕಾರಿದರು.