ಹಾಸನ: ಬಾರ್ನಲ್ಲಿ ನಡೆದ ಗಲಾಟೆ ವೇಳೆ ಎಲ್ಲರ ಮುಂದೆ ಕಪಾಳ ಮೋಕ್ಷ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ರಮೇಶ್ (42 ) ಮೃತ ವ್ಯಕ್ತಿ. ಆಗಸ್ಟ್ 9 ರಂದು ರಾತ್ರಿ ಮೆಹಬೂಬ (40) ಎಂಬಾತ ಹೊಳೆ ನರಸೀಪುರ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿ ಪೆಟ್ರೋಲ್ ಸುರಿದು ರಮೇಶನಿಗೆ ಬೆಂಕಿ ಹಚ್ಚಿದ್ದಾನೆ.
ಆಗಸ್ಟ್ 9 ರಂದು ರಾತ್ರಿ ರಮೇಶ್ ಮತ್ತು ಮದ್ಯಪಾನ ಮಾಡಲು ಬಂದಿದ್ದ ಮೆಹಬೂಬ ಎಂಬಾತನ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಕುಡಿದ ಮತ್ತಿನಲ್ಲಿ ರಮೇಶ್, ಎಲ್ಲರ ಮುಂದೆ ಮೆಹಬೂಬಗೆ ಕಪಾಳ ಮೋಕ್ಷ ಮಾಡಿದ್ದ. ಇದರಿಂದ ಕೋಪಗೊಂಡ ಮೆಹಬೂಬ, ರಮೇಶ್ನನ್ನು ಕೊಲ್ಲುವಂತೆ ತನ್ನ ಸ್ನೇಹಿತನಿಗೆ ತಿಳಿಸಿದ್ದ. ಆದರೆ, ಸ್ನೇಹಿತ ಕೃತ್ಯವೆಸಗಲು ಒಪ್ಪದಿದ್ದಾಗ, ತಾನೇ ರಮೇಶ್ ಅನ್ನು ಕೊಲ್ಲಲು ಸ್ಕೆಚ್ ಹಾಕಿದ್ದ. ರಾತ್ರಿ ಹೊಳೆ ನರಸೀಪುರ ಬಸ್ ನಿಲ್ದಾಣದ ಬಳಿ ಮೆಟ್ಟಿಲುಗಳ ಮೇಲೆ ಮಲಗಿದ್ದ ರಮೇಶ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಆರಂಭದಲ್ಲಿ, ರಮೇಶ ಸ್ಯಾನಿಟೈಸರ್ ಹಚ್ಚಿಕೊಂಡು ದೂಮಪಾನ ಮಾಡುವಾಗ ಬೆಂಕಿ ತಗುಲಿರಬಹುದು ಎಂದು ಶಂಕಿಸಿದ್ದ ಸ್ಥಳೀಯರು, ಪೊಲೀಸರ ಸಹಾಯದಿಂದ ಅಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಆಗಸ್ಟ್ 22 ರಂದು ಮೃತಪಟ್ಟಿದ್ದ. ರಮೇಶ್ ಕಡೆಯಿಂದ ಯಾರೂ ದೂರು ದಾಖಲಿಸಲು ಮುಂದೆ ಬಾರದ ಹಿನ್ನೆಲೆ ಪೊಲೀಸರೇ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದರು.
ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ಮಾಡಿದ್ದರು. ಈ ವೇಳೆ ಮೆಹಬೂಬನು ರಮೇಶ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಬೆಚ್ಚಿ ಬೀಳಿಸುವ ದೃಶ್ಯ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿ ಮೆಹಬೂಬನನ್ನು ಬಂಧಿಸಲು ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ. ಆದರೂ ಬಿಡದ ಪೊಲೀಸರು ಕೊನೆಗೂ ಆತನನ್ನು ಬಂಧಿಸಿದ್ದು, ಆರೋಪಿಯಿಂದ ಸತ್ಯಾಂಶ ಬಾಯ್ಬಿಡಿಸಿದ್ದಾರೆ. ಎಲ್ಲರ ಮುಂದೆ ತನ್ನ ಕಪಾಳಕ್ಕೆ ಹೊಡೆದು ಅವಮಾನ ಮಾಡಿದ್ದಕ್ಕಾಗಿ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರ ಮುಂದೆ ಹೇಳಿದ್ದಾನೆ. ಮೆಹಬೂಬ ರೌಡಿ ಶೀಟರ್ ಕೂಡ ಆಗಿದ್ದಾನೆ. ಸದ್ಯ, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.