ಹಾಸನ : ನಗರದ ಸಂತೆಪೇಟೆಯಲ್ಲಿರುವ ನಗರಸಭೆಯ ಕುವೆಂಪು ಸಭಾಂಗಣದಲ್ಲಿ 2020-21ನೇ ಸಾಲಿನ ಆಯವ್ಯಯದ ರೂಪುರೇಷೆ ಕುರಿತಂತೆ ಮೊದಲನೇ ಸುತ್ತಿನ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಎದುರು ಸಾರ್ವಜನಿಕರು ಪ್ರಮುಖ ಸಮಸ್ಯೆಗಳನ್ನು ತೆರೆದಿಟ್ಟರು.
ಬೀದಿ ದೀಪ, ಕಸ ವಿಲೇವಾರಿ, ವಾಯುಮಾಲಿನ್ಯ, ರಸ್ತೆ ಸಿಗ್ನಲ್ ಸಮಯದಲ್ಲಿ ಪಾದಚಾರಿಗಳಿಗೆ ಆಗುತ್ತಿರುವ ತೊಂದರೆ, ಶಾಲೆಗಳ ಸಮಸ್ಯೆ, ಬೀದಿ ಬದಿ ವ್ಯಾಪಾರಿಗಳಿಂದ ಆಗುತ್ತಿರುವ ತೊಂದರೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ವಿವಾರಿಸುವ ನಿಟ್ಟಿನಲ್ಲಿ ನಗರಸಭೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ನಗರಸಭೆ ಕಾರ್ಯವೈಖರಿಯನ್ನು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ರು.
ಸಾರ್ವಜನಿಕರ ಅಹವಾಲುಗಳಿಗೆ ಉತ್ತರಿಸಿದ ನಗರಸಭೆ ಆಯುಕ್ತ ಕೃಷ್ಣಮೂರ್ತಿ, ವಿದ್ಯುತ್ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು.
ವಾರ್ಡ್ ಸದಸ್ಯ ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಪುಣ್ಯತಿಥಿ ಕಾರ್ಯಕ್ರಮ ನಡೆದಿದೆ. ನಗರಸಭೆಯಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಒಂದು ಹಾರ ತಂದು ಹಾಕಲು ಹಣ ಇಲ್ಲವೇ ಎಂದು ಪ್ರಶ್ನಿಸಿದರು. ಸರ್ಕಾರದಿಂದ ಅನುದಾನದ ರೂಪದಲ್ಲಿ ಬರುವ ಹಣವೆಷ್ಟು? ಪರಿಶಿಷ್ಟ ಜಾತಿ/ಪಂಗಡದವರಿಗೆ ಮೀಸಲು ಹಣ ಕೊಡುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಸರ್ಕಾರದಿಂದ ಬರುವ ಅನುದಾನವನ್ನು ನಗರಸಭೆಯ 35 ವಾರ್ಡ್‌ಗಳಿಗೂ ಸಮನಾಗಿ ಹಂಚಬೇಕು ಎಂದು ಸಲಹೆ ನೀಡಿದರು.