ಹಾಸನ : ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ ಭಾಗಿಯಾಗಿದ್ದಾನೆ ಎಂಬುದು ಗೊತ್ತಾಗಿದೆ. ಆದರೆ, ಹಾಸನ ಹಿಮ್ಸ್ ಆಸ್ಪತ್ರೆಗೂ ಕೃತ್ಯವೆಸಗಿದ ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ. ತಪ್ಪು ಮಾಡಿದವರನ್ನು ಬಂಧಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದ್ದಾರೆ.
ಮೇ 8 ರಂದು ನಡೆದಿದ್ದ ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಸದ ಪ್ರಜ್ವಲ್ ರೇವಣ್ಣ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಹಿಮ್ಸ್ ಆಸ್ಪತ್ರೆ, ರಾಜ್ಯದಲ್ಲಿಯೇ ಮಾದರಿಯಾಗಿದೆ. ಅಂತಹ ಕೃತ್ಯವನ್ನು ನಮ್ಮ ಆಸ್ಪತ್ರೆಯ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಮಾಡಲು ಸಾಧ್ಯವಿಲ್ಲ. ಈ ಪ್ರಕರಣ ಆಸ್ಪತ್ರೆಯ ಹೊರಗೆ ನಡೆದಿರುವಂತಹದ್ದು, ಆಸ್ಪತ್ರೆ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅಂತಹ ವೈದ್ಯರು ಹಾಗೂ ಸಂಸ್ಥೆಯ ಹೆಸರನ್ನು ಹಾಳು ಮಾಡಲು ಕೆಲವರು ಹುನ್ನಾರ ಮಾಡಿದ್ದಾರೆ. ಇಂತಹ ದುಷ್ಕೃತ್ಯವೆಸಗಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಓದಿ : ಬೆಡ್ ಬ್ಲಾಕಿಂಗ್ ಸುಳ್ಳು ಆರೋಪ ಮಾಡಿದ್ದ ಕಿಡಿಗೇಡಿ ವಿರುದ್ಧ ಹಿಮ್ಸ್ ಸಿಬ್ಬಂದಿ ಪ್ರತಿಭಟನೆ
ಈ ಪ್ರಕರಣ ನಮ್ಮ ಗಮನಕ್ಕೆ ಬಾರದೆ ನಡೆದಿರುವಂತದ್ದು, ಆಸ್ಪತ್ರೆಯ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪ ಸತ್ಯಕ್ಕೆ ದೂರವಾದದ್ದು. ನಿಜವಾಗಿಯೂ ಪ್ರಕರಣದಲ್ಲಿ ಹಿಮ್ಸ್ ಸಿಬ್ಬಂದಿ ಕೈವಾಡ ಇದ್ದರೆ, ನಾವು ಕೂಡ ಆಂತರಿಕ ಸಮಿತಿ ರಚನೆ ಮಾಡಿ ತನಿಖೆ ನಡೆಸುತ್ತೇವೆ. ಇಂತಹ ಆರೋಪಗಳು ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಮನೋಸ್ಥೈರ್ಯ ಕುಗ್ಗುವಂತೆ ಮಾಡುತ್ತದೆ. ಪ್ರಕರಣವನ್ನು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆದ ಬೆನ್ನಲ್ಲೇ ಹಾಸನದಲ್ಲೂ ಪ್ರಕರಣ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಓರ್ವ ವ್ಯಕ್ತಿ ಕೋವಿಡ್ ಸೋಂಕಿತ ಮಹಿಳೆಯ ಸಂಬಂಧಿಯಿಂದ ಹಣ ಪಡೆದು ಬೆಡ್ ಕೊಡಿಸಿರುವ ಆರೋಪ ಕೇಳಿ ಬಂದಿದೆ. ಆದರೆ, ಈ ಪ್ರಕರಣಕ್ಕೂ ಹಿಮ್ಸ್ ಆಸ್ಪತ್ರೆಗೂ ಯಾವುದೇ ಸಂಬಂಧವಿಲ್ಲ ಎಂದು ಆಸ್ಪತ್ರೆಯ ನಿರ್ದೇಶಕ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಇಂದು ಆರೋಗ್ಯ ಸಚಿವರು ಹಿಮ್ಸ್ಗೆ ಭೇಟಿ ನೀಡಲಿದ್ದು, ಪ್ರಕರಣ ಸಂಬಂಧ ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.