ಹಾಸನ: ಕೊಟ್ಟ ಸಾಲವನ್ನು ವಾಪಸ್ ನೀಡದ ಕಾರಣಕ್ಕೆ ಕಬ್ಬಿನ ಗದ್ದೆಯಲ್ಲಿ ಜೀತಪದ್ಧತಿಯಡಿ ದುಡಿಸಿಕೊಳ್ಳುತ್ತಿದ್ದ 4 ಬಾಲಕರು ಸೇರಿದಂತೆ 15ಕ್ಕೂ ಹೆಚ್ಚು ಮಂದಿಯನ್ನು ಜೀತಪದ್ಧತಿಯಿಂದ ಮುಕ್ತಗೊಳಿಸಿರುವ ಘಟನೆ ಹೊಳೆನರಸೀಪುರ ತಾಲೂಕಿನ ಮುಂಡನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನ ಶಾಂತ ಜ್ಯೋತಿ ಸ್ವಯಂ ಸೇವಾ ಸಂಸ್ಥೆ ನೀಡಿದ್ದ ದೂರು ಆಧರಿಸಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಮಕ್ಕಳು, ಎಂಟು ಪುರುಷರು, ನಾಲ್ವರು ಮಹಿಳೆಯರನ್ನು ರಕ್ಷಿಸಿ ಅಂಬೇಡ್ಕರ್ ಭವನದಲ್ಲಿ ಆಶ್ರಯ ನೀಡಲಾಗಿದೆ. ಇವರೆಲ್ಲರೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು. ಕಲ್ಪನಹಳ್ಳಿ ತಾಂಡ್ಯದ ಇವರು, ಮನೆ ನಿರ್ವಹಣೆಗೆಂದು ಭಾದ್ಯನಾಯ್ಕ್ ಎಂಬುವವರಿಂದ ಸಾಲ ಪಡೆದಿದ್ದರಂತೆ. ಆದರೆ, ಜೀವನಾಧಾರವೇ ಇಲ್ಲದ ಇವರಿಗೆ ಪಡೆದ ಹಣವನ್ನು ವಾಪಸ್ ಕೊಡಲು ಆಗಲಿಲ್ಲ. ಇದೇ ಕಾರಣಕ್ಕೆ ಮಹಿಳೆಯರು, ಮಕ್ಕಳು, ವೃದ್ಧರನ್ನು ಭದ್ರಾವತಿಯಿಂದ ಹೊಳೆನರಸೀಪುರಕ್ಕೆ ಕರೆತಂದ ಭಾದ್ಯನಾಯ್ಕ್, ಮುಂಡನಹಳ್ಳಿಯ ಸೋಮಶೇಖರ್ ಅವರಿಗೆ ಸೇರಿದ್ದ ಕಬ್ಬಿನ ಗದ್ದೆ ಮಧ್ಯೆ ಸಣ್ಣ ಗುಡಿಸಲಲ್ಲಿ ಇರಿಸಿದ್ದರು ಎನ್ನಲಾಗಿದೆ.
ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ ಸೇರಿದಂತೆ ಕನಿಷ್ಠ ಸೌಲಭ್ಯವೂ ಇರಲಿಲ್ಲ. ಕೊಟ್ಟಷ್ಟು ಊಟ ಮಾಡಿ ಕತ್ತಲ ಕೂಪದ ನಡುವೆ ಬದುಕುತ್ತಿದ್ದರು. ಜೀತದಾಳು ಪೈಕಿ ಬಾಣಂತಿಯೊಬ್ಬಳು ಎರಡು ತಿಂಗಳ ಹಸುಗೂಸಿನೊಂದಿಗೆ ದುಡಿಯುತ್ತಿದ್ದಳು. ಹಲವು ತಿಂಗಳಿಂದ ಪ್ರಾಣಿಗಳಂತೆ ದುಡಿಸಿಕೊಳ್ಳುತ್ತಿದ್ದ ವ್ಯಕ್ತಿ ಸರಿಯಾಗಿ ಸಂಬಳ ಸಹ ಕೊಡುತ್ತಿರಲಿಲ್ಲ. ಆದರೆ, ರಾತ್ರಿ ವೇಳೆ ಕಳಪೆ ಗುಣಮಟ್ಟದ ಮದ್ಯ ಕೊಡುತ್ತಿದ್ದರು ಎಂಬುದು ಪರಿಶೀಲನೆ ವೇಳೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಂಡ್ಯ ನಿವಾಸಿಗಳನ್ನು ಒತ್ತೆಯಾಳಾಗಿ ಇರಿಸಿದ್ದ ಮತ್ತು ಆಶ್ರಯ ನೀಡಿದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಜೀತದಿಂದ ಮುಕ್ತಿಯಾದವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಸದ್ಯ ಮೇಸ್ತ್ರಿ ಭದ್ರಾವತಿಯ ಬಾಧ್ಯನಾಯ್ಕ್ ಹಾಗೂ ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.