ಹಾಸನ: ಫಲಾನುಭವಿ ರೈತರಿಗೆ ಸಲ್ಲಬೇಕಾದ ಬೆಳೆಯ ವಿಮೆ ಸಕಾಲದಲ್ಲಿ ನೀಡಬೇಕು. ಈ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನಹರಿಸಲಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತ ದೇವರಾಜ್ ಸೂಚಿಸಿದರು.
ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚು ಬಿತ್ತನೆ ಆಗಿದೆ. ಈ ಸಂಬಂಧ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಆಗದಂತೆ ನಿಗಾವಹಿಸಿ ಎಂದು ಹೇಳಿದರು.
ಆರೋಗ್ಯ ಇಲಾಖೆಯ ವತಿಯಿಂದ ನೀಡಲಾಗುವ ಆಯುಷ್ಮಾನ್ ಕಾರ್ಡ್ ಎಲ್ಲಾ ಬಿಪಿಎಲ್ ಕುಟುಂಬದವರಿಗೆ 5 ಲಕ್ಷದವರೆಗೂ ಉಚಿತ ಚಿಕಿತ್ಸೆ ದೊರೆಯುವ ಸೌಲಭ್ಯವಾಗಿದೆ. ಎಲ್ಲಾ ಬಡವರಿಗೂ ಇದು ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಅರಿವು ಮೂಡಿಸಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿಯ ವೈದ್ಯರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದು, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಚಳಿ ಹೆಚ್ಚಾಗಲಿದೆ. ಎರಡನೇ ಹಂತದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಪರೀಕ್ಷೆಗಳನ್ನು ಮಾಡಿ ಎಂದು ಹೇಳಿದರು.
ಈ ಬಾರಿ ಹೆಚ್ಚು ಅತಿವೃಷ್ಟಿಯಿಂದಾಗಿ ಹೆಚ್ಚು ಬೆಳೆಹಾನಿಯಾಗಿದೆ. ಈ ನಿಟ್ಟಿನಲ್ಲಿ ಪರಿಹಾರ ಪೋರ್ಟಲ್ನಲ್ಲಿ ಅರ್ಹ ಫಲಾನುಭವಿಗಳಿಗೆ ಆದಷ್ಟು ಬೇಗ ಪರಿಹಾರಧನ ಒದಗಿಸಿ ಎಂದ ಬೆಳಕು ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಪೂರ್ಣಗೊಂಡ ಕಾಮಗಾರಿಗಳ ವರದಿ ಪಡೆದರು. ನಿರಂತರ ಜ್ಯೋತಿ ಯೊಜನೆಯಡಿ ಬಾಕಿ ಇರುವ ಎಲ್ಲಾ ಮನೆಗಳಿಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕು. ಗಂಗಾ ಕಲ್ಯಾಣ ಯೋಜನೆ, ಕುಡಿಯುವ ನೀರಿನ ಯೋಜನೆಗಳಿಗೆ ತಕ್ಷಣವೇ ವಿದ್ಯುತ್ ಸಂಪರ್ಕ ಒದಗಿಸಲು ಸೂಚಿಸಿದರು.
ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಪಡಿತರದಾರರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ನೀಡುತ್ತಿದೆ. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ಮೋಸ ಹಾಗೂ ಹಣ ಪಡೆಯುತ್ತಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ವಿವಿಧ ಇಲಾಖೆ ಹಾಗೂ ನಿಗಮಗಳ ಮೂಲಕ ಸಾಲ ಸೌಲಭ್ಯಗಳನ್ನು ನೀಡಿದರೂ ಸಹ ಮಂಜೂರಾದ ಫಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕ್ಗಳು ನಿರಾಕರಿಸುತ್ತಿವೆ. ಈ ರೀತಿ ಆಗದಂತೆ ಕ್ರಮ ವಹಿಸಿ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಳವಡಿಸಲಾಗುತ್ತಿರುವ ನೀರಿನ ಬಳಕೆಯ ಮಾಪನ ಕಳಪೆ ಗುಣಮಟ್ಟದ್ದಾಗಿದೆ. ಈ ಬಗ್ಗೆ ತನಿಕೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ. ಚಿರತೆ ಆನೆಗಳಂತಹ ಕಾಡು ಪ್ರಾಣಿಗಳು ಇತ್ತೀಚೆಗೆ ಗ್ರಾಮಗಳತ್ತ ನುಗ್ಗುತ್ತಿವೆ. ಅವುಗಳಿಗೆ ಆಹಾರ ಅಥವಾ ನೀರಿನ ಅಭಾವವಾಗದಂತೆ ಅರಣ್ಯದೊಳಗೆ ಕೆರೆ ಕಟ್ಟೆಗಳನ್ನು ನಿರ್ಮಿಸಿ ಎಂದರು.