ಅರಸೀಕೆರೆ: ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದು, ಇವರದ್ದು ಅನಿಶ್ಚಿತತೆಯ ರಾಜಕಾರಣ ಎಂದು ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು. ಈ ಬಗ್ಗೆ ಮಾತನಾಡಿ ನಮ್ಮ ಬಾಯಿ ಹೊಲಸು ಮಾಡಿಕೊಳ್ಳಲ್ಲ. ಕಾಂಗ್ರೆಸ್ ರೀತಿಯಲ್ಲಿಯೇ ಮುಂದೊಂದು ದಿನ ಇದರ ಪ್ರತಿಫಲವನ್ನು ಅವರು ಅನುಭವಿಸುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕರು ಹರಿಹಾಯ್ದರು.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನ್ಯಾಫೆಡ್ ಮೂಲಕ ಖರೀದಿಸುತ್ತಿರುವ ಕೊಬ್ಬರಿಗೆ ಬೆಂಬಲ ಬೆಲೆ ಮತ್ತು ಸಹಾಯಧನ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅನಿಶ್ಚತತೆ ರಾಜಕಾರಣ ಮಾಡುತ್ತಿದ್ದು, ಪ್ರಜಾಭುತ್ವದಲ್ಲಿ ನಂಬಿಕೆ ಇಲ್ಲದ ಇವರು ಅದರ ಕಗ್ಗೊಲೆ ಮಾಡುತ್ತಿದ್ದಾರೆ. ಇವರ ಕಥೆಯನ್ನು ಎಳೆ-ಎಳೆಯಾಗಿ ಬಿಚ್ಚಿಡುತ್ತೇವೆ. ಮುಖ್ಯಮಂತ್ರಿಗಳು ನಾಟಕೀಯವಾಗಿ ಹಸಿರು ಶಾಲು ಹಾಕಿಕೊಂಡು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ಹೊರತು, ರೈತರಿಗೆ ಸಹಕಾರಿಯಾಗುವ ಯಾವ ಯೋಜನೆಯನ್ನೂ ರೂಪಿಸಿಲ್ಲ. ಹೀಗೆ ಮುಂದುವರೆದರೆ ರೈತ ವಿರೋಧಿ ಸರ್ಕಾರ ಎಂಬ ಪಟ್ಟಿಕಟ್ಟಿಕೊಳ್ಳಬೇಕಾಗುತ್ತದೆ. ಹಾಗಾಗಿ ಇವರದ್ದು ಅನಿಶ್ಚತತೆ ಸರ್ಕಾರವಾಗಿದ್ದು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದೇ ಅದರ ಕಗ್ಗೊಲೆ ಮಾಡುತ್ತಿದ್ದಾರೆ ಎಂದರು.
ಹಿಂದೆ ಇಂದಿರಾಗಾಂಧಿ ಸರ್ಕಾರ ಕೂಡ ಇದನ್ನೇ ಮಾಡಿ ತಕ್ಕ ಪಾಠ ಕಲಿತಿದ್ದರು. ಈ ಸರ್ಕಾರದ ಬಗ್ಗೆ ಮಾತನಾಡಲು ನಮಗೆ ಬೇಸರವಾಗುತ್ತದೆ. ಕೊರೊನಾದಿಂದಾಗಿ ಇವರ ಸರ್ಕಾರ ಬಚಾವ್ ಆಗಿದೆ. ಮುಂದೆ ಇವರುಗಳ ಕರ್ಮಕಾಂಡವನ್ನ ಎಳೆ- ಎಳೆಯಾಗಿ ನಮ್ಮ ಪಕ್ಷದಿಂದಲೇ ಬಿಚ್ಚಿಡುತ್ತೇವೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು.