ಹಾಸನ: ಹೇಗಾದರೂ ಮಾಡಿ ದೇವೇಗೌಡರನ್ನು ಒಪ್ಪಿಸಿ ರಾಜ್ಯಸಭೆಗೆ ಕಳುಹಿಸುತ್ತೇವೆ. ಅದಕ್ಕಾಗಿ ಯಾವ ಪಕ್ಷದವರ ಬಳಿಯಾದರೂ ಮತ ಕೇಳುತ್ತೇವೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರಂತಹ ಅನುಭವಿ ರಾಜಕಾರಣಿಯ ಸಲಹೆ ಸೂಚನೆಗಳು ದೇಶಕ್ಕೆ ಅವಶ್ಯಕತೆ ಇದೆ. ಕೆಟ್ಟ ಅನಿವಾರ್ಯ ರಾಜಕಾರಣದಿಂದ ಅವರು ಈ ಬಾರಿ ಸಂಸತ್ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಅದನ್ನು ಹಿಂಬಾಗಿಲಿನ ರಾಜಕಾರಣ ಎಂದು ಭಾವಿಸಬಾರದು ಎಂದರು.
ಬಹಳಷ್ಟು ಜನ ಪ್ರಜ್ಞಾವಂತ ರಾಜಕಾರಣಿಗಳ ಪ್ರಕಾರ ದೇವೇಗೌಡರು ಈಗ ಸಂಸತ್ ಪ್ರವೇಶ ಮಾಡುವುದು ಒಳ್ಳೆಯದು. ಏನಾದರೂ ಮಾಡಿ ನಾವು ದೇವೇಗೌಡರನ್ನು ಒಪ್ಪಿಸಿ ಸಂಸತ್ ಪ್ರವೇಶ ಮಾಡಿಸುತ್ತೇವೆ. ಈಗ ಯಾವುದೇ ಚುನಾವಣೆ ಇಲ್ಲ. ಯಾವುದಾದರು ಬೈ ಎಲೆಕ್ಷನ್ ಇದ್ದರೆ ಗೆಲ್ಲಿಸಬಹುದಿತ್ತು. ರಾಜ್ಯಸಭೆ ಹಿರಿಯರ ಸಂಸತ್ತು. ಇವರು ಅಲ್ಲಿ ಕುಳಿತು ಕೆಲಸ ಮಾಡಿದರೆ ರೈತರಿಗೆ ಒಳಿತಾಗಲಿದೆ. ಅವರ ಅವಶ್ಯಕತೆ ಇಂದು ನಮಗೆ ಇದೆ. ರಾಜ್ಯದ ಜನತೆಗಾಗಿಯಾದರೂ ದೇವೇಗೌಡರು ರಾಜ್ಯಸಭೆ ಪ್ರವೇಶಿಸಬೇಕು ಎಂದರು.
ದೇವೇಗೌಡರನ್ನು ಪಕ್ಷ ಭೇದ ಮರೆತು ಕಳುಹಿಸುತ್ತಾರೆ ಎಂಬುದು ನನ್ನ ಭಾವನೆ. ನಾವು ಹೋಗಿ ಯಾವ ಪಕ್ಷದವರನ್ನಾದರೂ ಮತ ಕೇಳುತ್ತೇವೆ. ಕಾಂಗ್ರೆಸ್ ಪಕ್ಷ ಅವರ ಬಳಿ ಹೆಚ್ಚಿರುವ ಮತ ನಮಗೆ ಕೊಟ್ಟರೆ ನಾವು ಅವರಿಗೆ ಯಾವಾಗಲಾದರೂ ಸಹಾಯ ಮಾಡುತ್ತೇವೆ. ಹಿಂದೆ ದೇವೇಗೌಡರು ಎಸ್ಎಂಕೆ ಅವರಿಗೆ ಈ ರೀತಿ ಸಹಾಯ ಮಾಡಿದ್ರು ಎಂದು ಶಾಸಕ ಶಿವಲಿಂಗೇಗೌಡ ನೆನಪಿಸಿಕೊಂಡಿದ್ದಾರೆ.