ಹಾಸನ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾದ ಹಿನ್ನೆಲೆ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಾಸಕ ಪ್ರೀತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡ ವೇಣುಗೋಪಾಲ್ ಸೇರಿದಂತೆ ಇತರರು ಸುಷ್ಮಾ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಶಾಸಕ ಪ್ರೀತಮ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರದ ದಿಟ್ಟ ಮಹಿಳೆಯನ್ನು ಕಳೆದುಕೊಂಡ ನೋವಿನ ದಿನ ಇದಾಗಿದೆ. ಅವರು ಕೇವಲ ಬಿಜೆಪಿಗೆ ಮಾತ್ರ ನಾಯಕಿಯಾಗಿರಲಿಲ್ಲ. ಪಾರ್ಲಿಮೆಂಟ್ ಹಾಗೂ ಇಡೀ ಮಹಿಳೆಯರ ಪ್ರೇರಣಾ ಶಕ್ತಿಯಾಗಿದ್ರು. ಎಲ್ಲಾ ಪಕ್ಷದ ಮುಖಂಡರೊಂದಿಗೆ ರಾಜಕಾರಣ ಮೀರಿದ ಒಂದು ಪ್ರೀತಿ, ವಿಶ್ವಾಸವನ್ನು ಗಳಿಸಿದ ಅಪರೂಪದ ನಾಯಕಿ ಆಗಿದ್ದರು ಎಂದು ಬಣ್ಣಿಸಿದರು.
ನಾಲ್ಕಕ್ಕೂ ಹೆಚ್ಚು ದಶಕಗಳ ಕಾಲ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ದೇಶಕ್ಕೆ ಮತ್ತು ರಾಜಕೀಯ ರಂಗಕ್ಕೆ ಕೊಟ್ಟಿದ್ದಾರೆ ಎಂದರು. ಅವರ ಈ ಸಾವು ಬಿಜೆಪಿಯ ಕಾರ್ಯಕರ್ತನಾದ ನನಗೆ ನೋವನ್ನುಂಟುಮಾಡಿದೆ ಮತ್ತು ಇದು ತಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.