ಅರಕಲಗೂಡು: ಇಲ್ಲಿನ ಕೊಣನೂರು ಸಂತೆಮಾಳದ ಬೀದಿ ಬದಿಯ ವ್ಯಾಪಾರಸ್ಥರಿಗೆ ಬೇರೆಡೆ ಮಳಿಗೆಗಳನ್ನು ಸ್ಥಳಾಂತರಿಸುವಂತೆ ಶಾಸಕ ಎ.ಟಿ.ರಾಮಸ್ವಾಮಿ ಮನವಿ ಮಾಡಿದರು.
ಹಾಸನ-ಮಡಿಕೇರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ರಸ್ತೆಬದಿಯ ಮಳಿಗೆಗಳಿಂದ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ. ಮಾರುಕಟ್ಟೆ ಪ್ರಾಂಗಣದ ಉದ್ಘಾಟನೆ ವೇಳೆ ಶಾಸಕ ರಾಮಸ್ವಾಮಿ ಅವರು, ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದರು.
ಶಾಸಕರ ಸೂಚನೆಯಂತೆ ಪ್ರಾಂಗಣದಲ್ಲಿನ 44 ಸ್ಥಳಗಳನ್ನು ಬಿಡ್ ಮಾಡಲಾಗಿತ್ತು. ಉಳಿದ 21 ವಿವಿಧ ಅಂಗಡಿ ಮಾಲೀಕರು ಮತ್ತು ಹೂ ವ್ಯಾಪಾರಿಗಳು ರಸ್ತೆ ಬದಿಯನ್ನು ಬಿಟ್ಟು ಹೋಗುವುದಿಲ್ಲವೆಂದು ಹಠ ಹಿಡಿದಿದ್ದರು. ಅವರನ್ನು ಶಾಸಕರು ಮನವೊಲಿಸಿದರು.
ಇಲ್ಲಿನ ಗಾಂಧಿ ಸರ್ಕಲ್ ಅಥವಾ ಬಿ.ಎಂ.ಶೆಟ್ಟಿ ಕಾಲೇಜು ಮುಂಭಾಗದ ರಸ್ತೆಯಲ್ಲಿ ವ್ಯಾಪಾರ ನಡೆಸಿ, ಇನ್ನೂ ಹೂ ವ್ಯಾಪಾರಿಗಳು ಗೋಪಾಲ ಕೃಷ್ಣಸ್ವಾಮಿ ದೇವಾಲಯದ ಎದುರು ವ್ಯಾಪಾರ ಮುಂದುವರಿಸಿ ಎಂದು ಮನವಿ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ರಮೇಶ್, ಸದಸ್ಯ ಬಿ.ನಾಗರಾಜು ಇದ್ದರು.